ಬೀದರ್ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ಎಸ್.ಬಂಧು ಆಯ್ಕೆ

ಬಸವಕಲ್ಯಾಣ,ಫೆ.1-ಸಸ್ತಾಪುರದ ಯಲ್ಲಾಲಿಂಗೇಶ್ವರ ಮಠದಲ್ಲಿ ಫೆ.6 ಮತ್ತು 7 ರಂದು ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಮತ್ತು ಯಲ್ಲಾಲಿಂಗೇಶ್ವರ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬೀದರ್ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಶ್ರಾಂತ ಉಪನ್ಯಾಸಕರಾದ ಡಾ.ಕೆ.ಎಸ್. ಬಂಧು ಸಿದ್ದೇಶ್ವರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಮಹಾದೇವಿ ತಾಯಿ ಶರಣೆ, ಸಂಯೋಜಕರಾದ ಡಾ. ಗವಿಸಿದ್ದಪ್ಪ ಪಾಟೀಲ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಪೀರಪ್ಪ ಸಜ್ಜನ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನಾಧ್ಯಕ್ಷರ ಪರಿಚಯ:
ಡಾ.ಕೆ.ಎಸ್.ಬಂಧು ಅವರು ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸಿದ್ದೇಶ್ವರ ಗ್ರಾಮದವರು. ಅಲ್ಲಿಯ ಶಂಕ್ರಪ್ಪ ಬಂಧು ಮತ್ತು ನೀಲಮ್ಮರ ಮಗನಾಗಿ 29 -10 -1958 ರಂದು ಜನಿಸಿದರು. ಇವರು ಎಂ.ಎ., ಎಂ.ಇಡಿ., ಪಿಎಚ್.ಡಿ ಪದವಿಯನ್ನು ಪಡೆದುಕೊಂಡವರು. ತದನಂತರ ಮಲ್ಲಿಕಾರ್ಜುನ ಖರ್ಗೆ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತ ಶಿಕ್ಷಕರಾಗಿ, ತದನಂತರ ಸರ್ಕಾರಿ ಪ್ರೌಢಶಾಲೆ ಶಹಬಾದದಲ್ಲಿ ಗಣಿತ ಶಿಕ್ಷಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಗಣಿತ ಶಿಕ್ಷಕರಾಗಿ 1982 ರಿಂದ 2005 ರವರೆಗೆ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಬಡ್ತಿ ಹೊಂದಿ 2005 ರಿಂದ 2018 ರವರೆಗೆ ಸಮಾಜಶಾಸ್ತ್ರದ ಉಪನ್ಯಾಸಕರಾಗಿ ಹುಮ್ನಾಬಾದ್ ಮತ್ತು ಕಮಲಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಸದ್ಯ ವಿಶ್ರಾಂತಿ ಜೀವನವನ್ನು ನಡೆಸುತ್ತಿದ್ದಾರೆ. ಇವರು ಏಕಲವ್ಯ, ಅಕ್ಷರ ಕ್ರಾಂತಿ ಎಂಬ ಎರಡು ನಾಟಕಗಳನ್ನು ರಚಿಸಿದ್ದಾರೆ. ಡಾ. ಅಂಬೇಡ್ಕರ್ ಮಹಾಪರಿ ನಿರ್ವಾಣ ರೇಡಿಯೋ ಟಾಕ್, ಭೀಮವಾಣಿ, ಭೀಮ ಘರ್ಜನೆ, ಮಗು-ನಗು ಎಂಬ ಮೂರು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ನನ್ನ ಜೀವನ, ಡಾಕ್ಟರ್ ಅಂಬೇಡ್ಕರ್ ಜೀವನ ಚರಿತ್ರೆ, ಅಂಬೇಡ್ಕರ್ ಮತ್ತು ಸಹಯೋಗಿಗಳು ಸಂಶೋಧನ ಕೃತಿ, ಡಾ.ಅಂಬೇಡ್ಕರ್, ಸಮಾಜಮುಖಿ ಲೇಖನಗಳ ಸಂಕಲನ ಅಲ್ಲದೆ ಬಸವೇಶ್ವರ ಮತ್ತು ಅಂಬೇಡ್ಕರ್ ರವರ ಸಾಮಾಜಿಕ ತತ್ವಗಳ ಪ್ರಸ್ತುತತೆ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಪ್ರಕಟಿಸಿ ಇದುವರೆಗೂ 14ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಜೀವನ ಸಾಧನೆ ಹೋರಾಟದ ಬದುಕನ್ನು ಕಂಡು ಬೋಧಿ ಬೆಳಕು ಎಂಬ ಬಂಧು ಅವರಿಗೆ ಗೌರವ ಅಭಿನಂದನ ಗ್ರಂಥ ವನ್ನು ಅರ್ಪಿಸಲಾಗಿದೆ. ಕಥೆ ,ಕವನ, ಭಜನೆಯ ಮೂಲಕ ಪ್ರಚಾರ ಪ್ರಸಾರವನ್ನು ಮಾಡುತ್ತಾ ಬುದ್ದ, ಬಸವ, ಪುಲೆ, ಅಂಬೇಡ್ಕರ್, ಸಾಹಿತ್ಯ ಅಧ್ಯಯನ ಓದುವುದು ಬರೆಯುವುದು ಸಾಹಿತ್ಯ ಸಂಗೀತ ಸಭೆಗಳಲ್ಲಿ ಪಾಲ್ಗೊಳ್ಳುವುದು ತಮ್ಮದೇ ಆದ ಒಂದು ಅಂಬೇಡ್ಕರ್ ಗ್ರಂಥಾಲಯವನ್ನು ಕೂಡ ಸ್ಥಾಪಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡಸಂಘ ಭಾರತ ಸೇವಾದಳ,ಸಮಾಶಾಸ್ತ್ರ ಉಪನ್ಯಾಸಕರ ಸಂಘ ,ಕರ್ನಾಟಕ ಸರ್ಕಾರಿ ನೌಕರರ ಸಂಘ, ಸಮಾಜ ಶಾಸ್ತ್ರ ಅಲುಮಿನಿಯಂ ಅಸೋಸಿಯೇಷನ್, ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ, ಅಕಾಡೆಮಿಕ್ ಸೋಶಿಯಲ್ ಫಾರ್ ಸೋಶಿಯಲ್ ಜಸ್ಟಿಸ್ ನ್ಯೂ ಡೆಲ್ಲಿ ,ಕರ್ನಾಟಕ ಜಾನಪದ ಪರಿಷತ್ತಿನಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾದ ಪಾತ್ರವನ್ನು ವಹಿಸಿದ್ದಾರೆ.
ಇವರ ಸಾಧನೆಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಶಿಕ್ಷಕರ ರತ್ನ ಪ್ರಶಸ್ತಿ ,ಉತ್ತಮ ಶಿಕ್ಷಕ ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ಅಂಬೇಡ್ಕರ್ ರತ್ನ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಕಲಾ ರತ್ನ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ ,ರಾಜ್ಯೋತ್ಸವ ಉಪನ್ಯಾಸಕ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿ, ಸಾಧಕರ ರತ್ನ ಪ್ರಶಸ್ತಿ,ಕನ್ನಡ ರಾಜ್ಯೋತ್ಸವ ಗೌರವ ಪುರಸ್ಕಾರ, ಶಿಕ್ಷಣ ರತ್ನ ಪ್ರಶಸ್ತಿ ,ಉರಿಲಿಂಗಪೆದ್ದಿ ಪ್ರಶಸ್ತಿ, ಅಪ್ಪ ಪ್ರಶಸ್ತಿ ,ಸಾಹಿತ್ಯ ಪ್ರಶಸ್ತಿ, ಸಾಧಕ ಪ್ರಶಸ್ತಿ ಹೀಗೆ ಹಲವಾರು 22 ಹೆಚ್ಚು ಪ್ರಶಸ್ತಿ ದೊರೆತಿವೆ.