ಬೀದರ್ ಉತ್ಸವ ಆಚರಣೆಯ ಸಕಲ ಸಿದ್ಧತೆಗಳು ಪೂರ್ಣ: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

ಬೀದರ್,ಜ.5-ಇದೇ ತಿಂಗಳ 7,8 ಮತ್ತು 9 ರಂದು ನಡೆಯಲಿರುವ ಬೀದರ್ ಉತ್ಸವ-2023ರ ತಯಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
ನಗರದ ಕೋಟೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ಉತ್ಸವ ಮುಖ್ಯ ವೇದಿಕೆಯಲ್ಲಿ ನೂತನ ಅನುಭವ ಮಂಟಪದ ಸ್ತಬ್ಧಚಿತ್ರವುಳ್ಳ ದೇಶ್ಯಾವಳಿ ಅಳವಡಿಸಲಾಗಿದೆ. ಈಗಾಗಲೇ ಬೀದರ್ ಜಿಲ್ಲೆಯಲ್ಲಿ 10 ಸಾವಿರ ವಿಐಪಿಗಳಿಗೆ ಪ್ಲ್ಯಾಟಿನಂ, ಗೋಲ್ಡ್ ಹಾಗೂ ಡೈಮಂಡ್ ಕಾರ್ಡಗಳನ್ನು ವಿತರಿಸಲಾಗಿದೆ. ಅವರೆಲ್ಲರಿಗೆ ಕೋಟೆ ಹತ್ತಿರದ ದಿಲ್ಲಿ ದರ್ವಾಜಾ ಮೂಲಕ ಪ್ರವೇಶವಕಾಶ ಕಲ್ಪಿಸಲಾಗಿದೆ. ಅವರ ವಾಹನ ನಿಲುಗಡೆಗೆ ಕೋಟೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಜ.7 ರಂದು ಉದ್ಘಾಟನಾ ಸಮಾರಂಭವನ್ನು ಕೇಂದ್ರದ ಸಂಸ್ಕøತಿ ಸಚಿವರಾದ ಕಿಶನ್ ರೆಡ್ಡಿ ಅವರು ಉದ್ಘಾಟಿಸಲಿದ್ದು, ಸಮಾರೋಪ ಭಾಷಣವನ್ನು ಜ.9 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ. ಪ್ರತಿದಿವಸ ಕನಿಷ್ಠ 2 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ವೇದಿಕೆ ಮುಂಭಾಗದಲ್ಲಿ 20 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಬೀದರ್ ಉತ್ಸವ ನಿಮಿತ್ಯ ಇತರೆ ಉತ್ಸವಗಳನ್ನು ಆಯೋಜಿಸಲಾಗಿದ್ದು, ಪತಂಗ ಉತ್ಸವ, ಸಿರಿಧಾನ್ಯ ಉತ್ಸವ, ಪಶು ಮೇಳ, ಕೃಷಿ ಮೇಳ, ಮಹಿಳಾ ಉತ್ಸವ ಸೇರಿದಂತೆ ಇತರೆ ಉತ್ಸವಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಕೋಟೆ ಆವರಣ ಸೇರಿದಂತೆ ನಗರದ 7 ಕಡೆ ಸಿಡಿಮದ್ದು ಹಾರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ಸವಕ್ಕೆ ಗ್ರಾಮೀಣ ಹಾಗೂ ತಾಲ್ಲೂಕು ಹಾಗೂ ನಗರದಿಂದ ಆಗಮಿಸುವ ಸಾರ್ವಜನಿಕರಿಗೆ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಬೀದರ್ ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಬೀದರ್ ಉತ್ಸವ ವಿಶೇಷ ಊಟವನ್ನು 45 ರೂಪಾಯಿ ವೆಚ್ಚದಲ್ಲಿ ಭೋಜನ ಹಾಗೂ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ನಂತರ ಜಿಲ್ಲಾಧಿಕಾರಿಗಳು ಮಾಧ್ಯಮದವರ ಜೊತೆಗೂಡಿ ಉತ್ಸವದ ಪೂರ್ವಸಿದ್ಧತೆ ಪರಿಶೀಲಿಸಿದರು.