ಬೀದರ್: ಇಳಿಕೆಯತ್ತ ಸಾಗಿದೆ ಸೋಂಕಿತರ ಸಂಖ್ಯೆ

ಬೀದರ:ಜೂ.1: ಕೋವಿಡ್‌ ಮೊದಲ ಅಲೆಯ ಕಹಿ ಅನುಭವ ಎಲ್ಲರಿಗೂ ಆಗಿದ್ದರೂ ಎರಡನೇ ಅಲೆಯ ಆರಂಭದಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿಲ್ಲ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ, ನಗರಸಭೆ ಚುನಾವಣೆಗಳು ಜಿಲ್ಲೆಯಲ್ಲಿ ಸೋಂಕು ಹೆಚ್ಚುವಂತೆ ಮಾಡಿದವು. ನಂತರ ಸರ್ಕಾರವೇ ನೇರವಾಗಿ ಕ್ರಮ ಕೈಗೊಂಡಿದ್ದರಿಂದ ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.

ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ, ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ 23,838 ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 396ಕ್ಕೆ ಇಳಿದಿದೆ. ಜನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಿದೆ.

15 ದಿನಗಳ ಹಿಂದೆ ನಿತ್ಯ 450ರಿಂದ 480 ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು.ಈಗ ಸೋಂಕಿತರ ಸಂಖ್ಯೆ ಎರಡಂಕಿಗೆ ಇಳಿದಿದೆ. ಮೇ ಆರಂಭದಲ್ಲಿ ಸೋಂಕಿತರ ಪ್ರಮಾಣ ಶೇಕಡ 11ರಷ್ಟು ಇತ್ತು. ತಿಂಗಳ ಅಂತ್ಯಕ್ಕೆ ಶೇಕಡ 1ರ ಸಮೀಪಕ್ಕೆ ಬಂದಿದೆ. ಭಾನುವಾರ 1,357 ಜನರ ಕೋವಿಡ್‌ ಪರೀಕ್ಷೆ ಮಾಡಿದ ನಂತರ 17 ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಒಬ್ಬರು ಮೃತಪಟ್ಟಿದ್ದು, 66 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ವೈದ್ಯಕೀಯ ಸಿಬ್ಬಂದಿ ಮೇಲಿನ ಒತ್ತಡವೂ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ 178, ಖಾಸಗಿ ಆಸ್ಪತ್ರೆಗಳಲ್ಲಿ 75 ಹಾಗೂ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 21 ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

2,209 ಬೆಡ್‌ಗಳಲ್ಲಿ 214 ಬೆಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಬೆಡ್‌ಗಳು ಖಾಲಿ ಇವೆ. ವೆಂಟಿಲೇಟರ್, ಆಮ್ಲಜನಕ ಹಾಗೂ ರೆಮ್‌ಡಿಸಿವಿರ್ ಲಭ್ಯ ಇದೆ. ಯಾವುದೇ ರೀತಿಯ ಕೊರತರ ಇಲ್ಲ. ನಗರದಲ್ಲಿ ಒಟ್ಟು ಐದು ಎಚ್‌ಆರ್‌ಟಿಸಿ ಸ್ಕ್ಯಾನಿಂಗ್‌ ಯಂತ್ರಗಳಿವೆ. ಬ್ರಿಮ್ಸ್‌ನಲ್ಲಿ ನಿತ್ಯ 60 ರಿಂದ 70 ಜನರ ಸ್ಕ್ಯಾನಿಂಗ್‌ ಮಾಡಲಾಗುತ್ತಿತ್ತು. ಈ ಸಂಖ್ಯೆ 15 ರಿಂದ 20ಕ್ಕೆ ಕುಸಿದಿದೆ.

‘ಕೋವಿಡ್‌ ನಿಯಂತ್ರಿಸಲು ವೈದ್ಯಕೀಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಔಷಧ, ಇಂಜೆಕ್ಷನ್, ಮಾತ್ರೆಗಳ ಕೊರತೆ ಇಲ್ಲ. ಸಕಾಲದಲ್ಲಿ ಸೋಂಕಿತರನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುತ್ತಿರುವ ಕಾರಣ ಸೋಂಕು ಕಡಿಮೆಯಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಹೇಳುತ್ತಾರೆ.