ಸಂಜೆವಾಣಿ ವಾರ್ತೆ
ಬೀದರ್: ಜೂ.21:ನಗರೋತ್ತಾನ ಹಾಗೂ ನಗರಸಭೆಯ 15 ಫೈನಾನ್ಸ್ ಯೋಜನೆ ಅಡಿಯಲ್ಲಿ ನೂತನವಾಗಿ ಬೀದರ ನಗರದಲ್ಲಿ ಅಳವಡಿಸಲಾದ ಅಲಂಕಾರಿಕ ಬೀದಿ ದೀಪಗಳಿಗೆ ಅಂಬೇಡ್ಕರ ವೃತ್ತದ ಬಳಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ ಖಾನ್ ಅವರು ಸೋಮವಾರ ಚಾಲನೆ ನೀಡಿದರು.
ನಂತರ ಸಚಿವರು ಮಾತನಾಡಿ 80.86 ಲಕ್ಷ ವೆಚ್ಚದಲ್ಲಿ ನಗರೋತ್ತಾನ ಯೋಜನೆ ಅಡಿಯಲ್ಲಿ ಬೀದರನ ಅಂಬೇಡ್ಕರ ವೃತ್ತದಿಂದ ಶಿವಾಜಿ ವೃತ್ತ ಹಾಗೂ ಬಸವೇಶ್ವರ ವೃತ್ತ ದಿಂದ ಹರಳಯ್ಯ ವೃತ್ತದವರೆಗೆ 46 ಬೀದಿ ದೀಪಗಳನ್ನು ಅಳವಡಿಸಲಾಗಿದೆ ಅದೇ ರೀತಿ ಬೀದರ ನಗರಸಭೆ ವತಿಯಿಂದ 32 ಲಕ್ಷ ರೂಪಾಯಿ ವೆಚ್ಚದಲ್ಲಿ 15 ಪೈನಾನ್ಸ್ ಯೋಜನೆ ಅಡಿಯಲ್ಲಿ ಹೆಣ್ಣು ಮಗು ವೃತ್ತದಿಂದ ಶಿವನಗರ ಸಿಗ್ನಲ್‍ವರೆಗೆ 21 ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಈ ಬೀದಿ ದೀಪಗಳ ಅಳವಡಿಕೆಯಿಂದ ಬೀದರ ನಗರವು ರಾತ್ರಿ ಸಮಯದಲ್ಲು ಕಂಗೊಳಿಸಲಿದೆ. ಈ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿಯನ್ನು ಗುತ್ತಿಗೆದಾರರಾದ ಶಿವಾನಂದ ಕೆ ಪಾಟೀಲ ಅವರಿಗೆ ವಹಿಸಲಾಗಿತ್ತು. ಮುಂದಿನ ದಿನಗಳಲ್ಲಿ ನಗರಸಭೆಯಡಿ ಬೀದರ ಜಿಲ್ಲೆಗೆ ಅನುಕೂಲವಾಗುವ ಇನ್ನು ಹೆಚ್ಚಿನ ಯೋಜನೆ ರೂಪಿಸುವ ಗುರಿ ಇದೆ ಎಂದರು.
ಮುಂದಿನ ದಿನಗಳಲ್ಲಿ ನಗರಸಭೆಯು ಜಿಲ್ಲೆಯ ಜನರಿಗಾಗಿ ಉತ್ತಮ ಕೆಲಸ ಮಾಡಲಿದೆ. ಬೀದರನ ಸಾರ್ವಜನಿಕರಿಗೆ ನಗರಸಭೆಯಿಂದ ಯಾವುದೇ ರೀತಿಯ ತೊಂದರೆಯಾದಲ್ಲಿ ನನ್ನ ಗಮನಕ್ಕೆ ತಂದಲ್ಲಿ ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ ಲಮಾಣಿ, ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರ ಅರುಣ, ಬೀದರ ನಗರಸಭೆ ಆಯುಕ್ತ ಶಿವರಾಜ ರಾಠೋಡ, ನಗರಸಭೆ ವ್ಯವಸ್ಥಾಪಕ ಅನಿಲ ಚಲುವಾ ಸೇರಿದಂತೆ ಇತರರು ಉಪಸ್ಥಿತರಿದ್ದರು.