ಬೀದರ್‍ನಲ್ಲಿ 10 ಸೋಲಾರ್ ಹೈಮಾಸ್ಟ್ ದೀಪ ಅಳವಡಿಕೆ

ಬೀದರ್:ಸೆ.1: ಸಾರ್ವಜನಿಕರ ಅನುಕೂಲಕ್ಕಾಗಿ ಬೀದರ್ ನಗರದ 10 ಕಡೆಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ 10 ಸೋಲಾರ್ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಶಾಸಕ ರಹೀಂಖಾನ್ ತಿಳಿಸಿದ್ದಾರೆ.

ಚಿದ್ರಿ ರಿಂಗ್ ರಸ್ತೆ, ಮುಲ್ತಾನಿ ಕಾಲೊನಿ, ಮಂಗಲಪೇಟ್ ಕ್ರಾಸ್, ಫೈಜಪುರ ದರ್ಗಾ, ಬಿಲಾಲ್ ಕಾಲೊನಿ ಹತ್ತಿರ, ಗವಾನ್ ಚೌಕ್, ಮೈಲೂರು ರಿಂಗ್ ರಸ್ತೆ, ಹಕ್ ಕಾಲೊನಿ, ಬಿದ್ರಿ ಕಾಲೊನಿ ಹಾಗೂ ನಯಾ ಕಮಾನ್ ಪ್ರದೇಶದಲ್ಲಿ 12 ಮೀಟರ್ ಎತ್ತರದ ತಲಾ ರೂ. 10 ಲಕ್ಷ ವೆಚ್ಚದ ಸೋಲಾರ್ ಹೈಮಾಸ್ಟ್ ದೀಪಗಳ ಸೇವೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ರಾತ್ರಿ ವಿದ್ಯುತ್ ಕೈಕೊಟ್ಟಾಗ ವಿವಿಧೆಡೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದಕ್ಕೆ ಪರಿಹಾರ ಕಲ್ಪಿಸುವ ದಿಸೆಯಲ್ಲಿ ಸೋಲಾರ್ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೋಲಾರ್ ದೀಪಗಳಿಂದಾಗಿ ವಿದ್ಯುತ್ ಅವಲಂಬನೆ ತಪ್ಪಲಿದೆ. ಸೋಲಾರ್ ದೀಪಗಳು ರಾತ್ರಿ ನಿರಂತರವಾಗಿ ಬೆಳಗಲಿವೆ ಎಂದು ಹೇಳಿದ್ದಾರೆ.