ಬೀದರ್‍ನಲ್ಲಿ ಶೀಘ್ರ ಅಕ್ಕ ಮಹಾದೇವಿ ವಿವಿ ಪ್ರಾದೇಶಿಕ ಕೇಂದ್ರ

ಬೀದರ್: ಮೇ.14:ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಬೀದರ್‍ನಲ್ಲಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಡಿ.ಬಿ. ಕಂಬಾರ ಹೇಳಿದರು.

ನಗರದ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೇಂದ್ರ ಪ್ರಾರಂಭಿಸುವ ದಿಸೆಯಲ್ಲಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರದಿಂದ ವಿಶ್ವವಿದ್ಯಾಲಯ ಅಧೀನದ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಪ್ರಯುಕ್ತ ಅಕ್ಕ ಮಹಾದೇವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಸೇವಾ ಚಟುವಟಿಕೆಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜಿ. ಹುಗ್ಗಿ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಸತ್ಯ ಮೇವ ಜಯತೆ ಹಾಗೂ ಶ್ರಮ ಮೇವ ಜಯತೆ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಶ್ರಮ ಸಂಸ್ಕøತಿಯು ಶಕ್ತಿಶಾಲಿ ರಾಷ್ಟ್ರ ಕಟ್ಟಲು ನೆರವಾಗುತ್ತದೆ. ಕಾರಣ, ಯುವಕರು ಕ್ರಿಯಾಶೀಲರಾಗಿರಬೇಕು. ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸೇವಾ ಚಟುವಟಿಕೆ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾಲೇಜಿನ ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ ಬಿರಾದಾರ, ಜೀವವಿಜ್ಞಾನ ವಿಭಾಗದ ಮುಖ್ಯಸ್ಥೆ ವೀಣಾ, ಅಕ್ಕಮಹಾದೇವಿ ಕನ್ಯಾ ಪ್ರೌಢಶಾಲೆ ಮುಖ್ಯಶಿಕ್ಷಕಿ ಇಂದುಮತಿ ಮಜಗೆ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆ ‘ಬ’ ಘಟಕದ ಅಧಿಕಾರಿ ಡಾ. ಧನಲಕ್ಷ್ಮಿ ಪಾಟೀಲ ಶಿಬಿರದ ವರದಿ ವಾಚಿಸಿದರು. ವಿದ್ಯಾರ್ಥಿನಿ ಐಶ್ವರ್ಯ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ‘ಅ’ ಘಟಕದ ಅಧಿಕಾರಿ ಡಾ. ಮಂಜು ಮಾಲೆಕರ್ ಸ್ವಾಗತಿಸಿದರು. ಉಪನ್ಯಾಸಕಿ ಡಾ. ವೈಶಾಲಿ ಪಾಟೀಲ ವಂದಿಸಿದರು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಸಂಚಾಲಿತ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯ ವತಿಯಿಂದ ಶಿಬಿರ ಸಂಘಟಿಸಲಾಗಿತ್ತು.