ಬೀದರ್‍ನಲ್ಲಿ ವರುಣನ ಆರ್ಭಟ: ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತ

ಬೀದರ್:ಮಾ.19: ಗಡಿ ಜಿಲ್ಲೆ ಬೀದರ್‍ನಲ್ಲಿ ಅಕಾಲಿಕ ಮಳೆಯ ಆರ್ಭಟ ಮುಂದುವರಿದಿದೆ. ಆಲಿಕಲ್ಲು ಮಳೆಯಿಂದಾಗಿ ಬೀದರ್‍ನ ಕೆಲ ಪ್ರದೇಶ ಕಾಶ್ಮೀರದಂತೆ ಭಾಸವಾಗುತ್ತಿದೆ. ರಸ್ತೆ ಪಕ್ಕದಲ್ಲಿ ರಾಶಿ ರಾಶಿ ಆಲಿಕಲ್ಲುಗಳು ಬಿದ್ದಿದ್ದು, ಅದನ್ನು ನೋಡಲು ಸವಾರರು ಮುಗಿಬಿದ್ದಿದ್ದಾರೆ.

ಇನ್ನೂ ಮಳೆಯಿಂದಾಗಿ ನೂರಾರು ವಿದ್ಯುತ್ ಕಂಬಗಳು ಹಾಗೂ ದೊಡ್ಡ ದೊಡ್ಡ ಮರಗಳು ನೆಲಕ್ಕೆ ಅಪ್ಪಳಿಸಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ನಿಟೂರ್ ಕೂಡ್ಲಿ, ನಾಗರಾಳ ಸೇರಿದಂತೆ ಹತ್ತಾರು ಹಳ್ಳಿಯ ಜನರು ವಿದ್ಯುತ್ ಇಲ್ಲದೆ ಕತ್ತತಲ್ಲಿ ಕಾಲ ಕಳೆಯತ್ತಿದ್ದಾರೆ.

ರೈತರು ಸಾಲ ಮಾಡಿ ಬೆಳೆದ ಬಾಳೇಹಣ್ಣು, ಮಾವು ನೆಲಸಮವಾಗಿವೆ. ರೈತರ ಹೊಲಗಳು ಮಂಜುಗಡ್ಡೆಯಂತ್ತಾಗಿದ್ದು, ಬಳೆ ನಷ್ಟದಿಂದ ರೈತರು ಕಣ್ಣೀರಾಕುತ್ತಿದ್ದಾರೆ. ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಮೂರು ದಿನಗಳಿಂದ ಮಳೆ ಬೆಂಬಿಡದೆ ಸುರಿಯುತ್ತಿದೆ. ಇದರಿಂದಾಗಿ ಬೀದರ್ ಕರ್ನಾಟಕದ ಕಾಶ್ಮೀರವಾಗಿ ಬದಲಾಗಿದೆ. ಮಂಜುಗಡ್ಡೆಯನ್ನು ನೋಡಿ ಜನ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರೆ, ಇನ್ನೊಂದೆಡೆ ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಬೀದರ್‍ನ ಮರಕಲ ಹಾಗೂ ಜನವಾಡಾ ಗ್ರಾಮದ ಹೊಲಗಳಲ್ಲಿ ಆಲಿಕಲ್ಲುಗಳ ರಾಶಿ ಬಿದ್ದಿವೆ.

ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಬೇಸಿಗೆಯಲ್ಲಿ ವರಣ ಗುಡುಗು ಮಿಂಚ ಸಹಿತ ಅಬ್ಬರಿಸುತ್ತಾನೆ. ಅದರಲ್ಲೂ ಆಲಿಕಲ್ಲು ಮಳೆ ಆರ್ಭಟ ಹೆಚ್ಚಾಗಿರುತ್ತದೆ. ಗಾಳಿಯ ವೇಗ ಹೆಚ್ಚಾಗಿರುತ್ತದೆ. ಹೀಗಾಗಿ ಯಾರು ಕೂಡ ಮಳೆ ಬೀಳುವಾಗ ಮರದ ಆಶ್ರಯ ಪಡೆಯುವುದನ್ನು ತಪ್ಪಿಸಿ.