ಬೀದರ್‍ನಲ್ಲಿ ಗುರುನಾನಕರ ಜಯಂತಿ ಸಂಭ್ರಮ

ಸಂಜೆವಾಣಿ ವಾರ್ತೆ
ಬೀದರ್: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ ದೇವ ಅವರ ಜಯಂತಿಯನ್ನು ನಗರದಲ್ಲಿ ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಜಯಂತಿ ಅಂಗವಾಗಿ ಸೋಮವಾರ ಸಂಜೆ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಜನ ಸಿಖ್ ಧರ್ಮೀಯರು ಪಾಲ್ಗೊಂಡಿದ್ದರು.
ನೀಲಿ, ಹಳದಿ ಬಣ್ಣದ ಧಾರ್ಮಿಕ ಧ್ವಜಗಳು ಹಾಗೂ ಕತ್ತಿಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕಿದರು. ಕತ್ತಿ ವರಸೆ ಸಾಹಸ ಪ್ರದರ್ಶಿಸಿದರು. ಗುರುನಾನಕ ದೇವ ಹಾಗೂ ಸಿಖ್ ಧರ್ಮದ ಪರ ಜಯಘೋಷ ಹಾಕಿದರು.
ನಗರದ ಬಸ್ ನಿಲ್ದಾಣ ಸಮೀಪದ ಗುರುದ್ವಾರದಿಂದ ಆರಂಭಗೊಂಡ ಮೆರವಣಿಗೆಯು ನ್ಯೂಟೌನ್ ಪೆÇಲೀಸ್ ಠಾಣೆ ಮಾರ್ಗವಾಗಿ ಮಡಿವಾಳ ವೃತ್ತ, ರೋಟರಿ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಗುರುದ್ವಾರದ ಕಡೆಗೆ ಮುಖ ಮಾಡಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಗುರುದ್ವಾರದಲ್ಲಿ ಸಂಭ್ರಮ:
ಗುರುದ್ವಾರದ ಪರಿಸರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ನಾಂದೇಡ್, ದೆಹಲಿ, ಹೈದರಾಬಾದ್ ಸೇರಿದಂತೆ ಹಲವು ನಗರಗಳಿಂದ ಸಿಖ್ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಬಂದು ಬೀಡು ಬಿಟ್ಟಿದ್ದಾರೆ.
ಗುರುದ್ವಾರಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಹಗಲು-ರಾತ್ರಿ ‘ಲಂಗರ್’ನಲ್ಲಿ ದಾಸೋಹ ನಡೆಯುತ್ತಿದೆ. ಅನೇಕರು ಸ್ವಯಂ ಪ್ರೇರಣೆಯಿಂದ ದಾಸೋಹದಲ್ಲಿ ಭಕ್ತರಿಗೆ ಉಣ ಬಡಿಸುತ್ತಿದ್ದಾರೆ. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಬೆಳಿಗ್ಗೆ ಗುರುದ್ವಾರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಕೀರ್ತನೆ, ಪ್ರವಚನ ಕಾರ್ಯಗಳು ನಡೆದವು. ಭಕ್ತರು ಸರತಿ ಸಾಲಲ್ಲಿ ಹೋಗಿ ಗುರುಗ್ರಂಥ ಸಾಹೀಬ್ ದರ್ಶನ ಪಡೆದರು.
ಗುರುದ್ವಾರ ನಾನಕ್ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಡಾ.ಬಲಬೀರ್ ಸಿಂಗ್, ಸದಸ್ಯರಾದ ಮನಪ್ರೀತ್ ಸಿಂಗ್, ಜಸ್ಪ್ರೀತ್ ಸಿಂಗ್, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಬಸವರಾಜ ಧನ್ನೂರ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಸಿಖ್ ಧರ್ಮೀಯರ ಐದು ಪವಿತ್ರ ಕ್ಷೇತ್ರಗಳಲ್ಲಿ ಬೀದರ್ ಕೂಡ ಒಂದಾಗಿದೆ.