
ಕಲಬುರಗಿ,ಸೆ.18: ಅತ್ಯಂತ ಹಿಂದುಳಿದ ಭಾಗವಾಗಿರುವ ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಗೆ ಕೇಂದ್ರ ಸರ್ಕಾರವು ಸೈನಿಕ ಶಾಲೆಯನ್ನು ಮಂಜೂರು ಮಾಡಿ ಕಲ್ಯಾಣ ಕರ್ನಾಟಕ ಉತ್ಸವದಿನದಂದು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮ ದಿನದಂದೇ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಆದೇಶಿಸಿ, ನಮ್ಮ ಭಾಗಕ್ಕೆ ಅಮೂಲ್ಯ ಕೊಡುಗೆ ನೀಡಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿರವರಿಗೆ ಹಾಗೂ ರಕ್ಷಣಾ ಸಚಿವ ರಾಜನಾಥಸಿಂಗ್, ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ತಿಳಿಸಿದ್ದಾರೆ.
ದೇಶದ 23 ನಗರಗಳಲ್ಲಿ ಶಾಲೆಯ ಪ್ರಾರಂಭವಾಗಲಿದ್ದು ಅದರಲ್ಲಿ ರಾಜ್ಯದ ಏಕೈಕ ಜಿಲ್ಲೆ ಬೀದರ್ ಸಹ ಒಂದಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಮ್ಮ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿವ್ಹಿಬಿ ಕಾಲೇಜಿನ ಆವರಣದಲ್ಲಿ ಪ್ರತಿಷ್ಠಿತ ಸೈನಿಕ ಶಾಲೆ ಆರಂಭವಾಗಲಿದೆ. ಶಾಲೆಯು ಸುಮಾರು 8 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಶಾಲೆಗೆ ಹೆಚ್ಚಿನ 24 ಎಕರೆ ಪ್ರದೇಶ ವಸತಿ ನಿಲಯ ಹಾಗೂ ಇನ್ನಿತರ ಕೆಲಸಗಳಿಗೆ ಬೇಕಾಗಲಿದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬೀದರ್‍ನಲ್ಲಿ ಸೈನಿಕ ಶಾಲೆ ಮಂಜೂರಾತಿಗಾಗಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಶೇಷವಾಗಿ ಆಡಳಿತ ಮಂಡಳಿಯ ಸದಸ್ಯರಾದ ಬೀದರ್‍ನ ಡಾ. ರಜನೀಶ್ ವಾಲಿಯವರು ಅತಿ ಹೆಚ್ಚು ಮುತುವರ್ಜಿವಹಿಸಿ ಬೀದರ್‍ನ ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ಅವರ ಮೇಲೆ ಒತ್ತಡ ಹೇರಿ ಕಳೆದ ವರ್ಷ ಕೇಂದ್ರ ಸರ್ಕಾರದ ರಕ್ಷಣಾ ಸಚಿವ ರಾಜನಾಥಸಿಂಗ್ ಅವರಿಗೆ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಅದಕ್ಕೆ ಸ್ಪಂದನೆ ದೊರೆತಿರುವದು ಸಂತಸದ ವಿಷಯವಾಗಿದೆ. ಅದಕ್ಕಾಗಿ ಅಧ್ಯಕ್ಷರು ಹಾಗೂ ಡಾ. ರಜನೀಶ್ ವಾಲಿಯವರು ಅಭಿನಂದನಾರ್ಹರು ಎಂದು ಅವರು ತಿಳಿಸಿದ್ದಾರೆ.
ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಸಹಾಯವಾಗಲಿದ್ದು, ಸೈನಿಕ ಶಾಲೆಗಳ ಪ್ರಾಥಮಿಕ ಉದ್ದೇಶವು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ರಾಷ್ಟ್ರೀಯ ರಕ್ಷಣಾ ಆಕ್ಯಾಡೆಮಿ (ಎನ್.ಡಿಎ) ಮತ್ತು ಭಾರತೀಯ ನೌಕಾ ಅಕ್ಯಾಡೆಮಿಗೆ ಪ್ರವೇಶಿಸಲು ಸಿದ್ದಪಡಿಸುವದು ಆಗಿದೆ. ಆ ನಿಟ್ಟಿನಲ್ಲಿ ನಮ್ಮ ಭಾಗದ ಮಕ್ಕಳು ಸಹ ಭವಿಷ್ಯದಲ್ಲಿ ಎನ್‍ಡಿಎ ಹಾಗೂ ಐಎನ್‍ಎಗೆ ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿಯಾಗುತ್ತಾರೆ. ಹಾಗಾಗಿ ಸೈನಿಕ ಶಾಲೆಯು ನನ್ನ ಮತಕ್ಷೇತ್ರ ಹಾಗೂ ಶಿಕ್ಷಣ ಸಂಸ್ಥೆಯಲ್ಲಿ ಪ್ರಾರಂಭವಾಗಿರುವದು ನಮ್ಮ ಭಾಗದ ಹಿರಿಮೆ ಹೆಚ್ಚಲಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.