ಬೀದರಿನ ಪ್ರತಿಭೆಗಳಿಗೆ ತಕ್ಕ ವೇದಿಕೆ ಅಗತ್ಯ : ಎಸ್.ಸಿ.ಬಳತೆ

ಭಾಲ್ಕಿ:ಜೂ.20: ಬೀದರ ಜಿಲ್ಲೆಯ ಪ್ರತಿಭೆಗಳಿಗೆ ತಕ್ಕ ವೇದಿಕೆ ಅತ್ಯಗತ್ಯವಾಗಿದೆ ಎಂದು ಉದ್ಯಮಿ ಶುಭಾಂಗಿ ಚನ್ನಬಸವ ಬಳತೆ ಅಭಿಪ್ರಾಯಪಟ್ಟರು. ಪಟ್ಟಣದ ಟೌನ್ ಹಾಲ್ ನಲ್ಲಿ ಮಸ್ತಿಕಲಾ ತಂಡದ ವತಿಯಿಂದ ಆಯೋಜಿಸಿದ್ದ ಬಿದ್ರಿ ಗ್ವಾಟ್ ಟಾಲೆಂಟ್ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೀದರ ಜಿಲ್ಲೆಯಲ್ಲಿ ಅತ್ಯುತ್ತಮ ಕಲಾವಿದರಿದ್ದಾರೆ. ಅವರ ಕಲಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯ ಅಗತ್ಯವಾಗಿದೆ. ಮಸ್ತಿಕಲಾ ತಂಡದ ಕಲಾವಿದರು ಭಾಲ್ಕಿ ಪಟ್ಟಣದಲ್ಲಿ ಇಂತಹ ಸುಂದರ ವೇದಿಕೆ ಕಲ್ಪಿಸಿ ಇಲ್ಲಿಯ ಕಲಾವಿದರ ಪ್ರದರ್ಶನಕ್ಕೆ ಅಣಿ ಮಾಡಿಕೊಟ್ಟಿರುವುದು ತುಂಬಾ ಉತ್ತಮ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇವೇಳೆ ಬೀದರ ಜಿಲ್ಲೆಯ ಉತ್ತಮ ಕಲಾವಿದರು ಆಗಮಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿ ನೋಡುಗರ ಗಮನ ಸೆಳೆದರು. ತಂಡ ನೃತ್ಯ, ವಚನ ಗಾಯನ, ಸಂಗೀತ, ಸೋಲೋ ಡ್ಯಾನ್ಸ್ ಸೇರಿದಂತೆ ವಿವಿಧ ಕಲೆಗಳನ್ನು ಪ್ರದರ್ಶಿಸಿದ ಕಲಾ ತಂಡಗಳಿಗೆ ತಾಲೂಕಿನ ವಿವಿಧ ಉದ್ಯಮಿಗಳ ಸಹಯೋಗದೊಂದಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ಕಲಾ ತಂಡಕ್ಕೆ 25 ಸಾವಿರ ರೂ. ನಗದು ಬಹುಮಾನದೊಂದಿಗೆ ಟ್ರೋಫೀ ನೀಡಿ ಗೌರವಿಸಲಾಯಿತು. ಡಿ.ಕೆ.ಡಿ ಸೆಲೆಬ್ರಿಟಿ ಮಹೇಶ್, ಸಂಗೀತ ಶಿಕ್ಷಕ ಎಸ್.ಕೆ.ಪಾಟೀಲರು. ಚಿತ್ರಾ ದೇಶಮುಖ, ವಿಕಾಸ ಪಾಟೀಲ ತೀರ್ಪುಗಾರರಾಗಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಆಯೋಜಕ ಅಭಿಶೇಕ ಮೋರೆ, ಜೈಕಿಶನ ಬಿಯಾಣಿ, ಚನ್ನವೀರ ಚಕ್ರಸಾಲಿ, ಹಣಮಂತ ಕಾರಾಮುಂಗೆ, ಸೋಮನಾಥ ಹೊಸಾಳೆ ಉಪಸ್ಥಿತರಿದ್ದರು.