
ಬೀದರ:ಮೇ.26:ಸಮಸ್ತ ಮಾನವ ಜನಾಂಗದ ಕಲ್ಯಾಣ ಬಯಸಿದ ಶ್ರೀ ಜಗದ್ಗುರು ಪಂಚಾಚಾರ್ಯರ ಸದರಿ ಸರ್ಕಲ್, ಇಡೀ ಭಾರತ ದೇಶದಲ್ಲಿಯೇ ಪ್ರ ಪ್ರಥಮ ವೃತ್ತವಾಗಿದೆ. ಎಂದು ಶ್ರೀ ಕಾಶಿ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅವರು ನೌಬಾದಿನ ಜ್ಞಾನ ಶಿವಯೋಗಾಶ್ರಮದ ಅಧಿಪತಿಗಳಾದ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ಬೇಮಳಖೇಡ, ಗೋರಟಾ ಅವರ ಶತ ಪ್ರಯತ್ನದ ಫಲವಾಗಿ ನೂತನವಾಗಿ ನಿರ್ಮಾಣಗೊಂಡ ನೌಬಾದ ರಿಂಗ್ ರೋಡಿನ ಸರ್ಕಲ್‍ದಲ್ಲಿ ನೂತನವಾಗಿ ಶ್ರೀ ಜಗದ್ಗುರು ಪಂಚಾಚಾರ್ಯ ಸರ್ಕಲ್‍ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯುಗ ಪೂರ್ವ ಕಾಲದ ಇತಿಹಾಸವನ್ನು ಹೊಂದಿರುವ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಯುಗ ಯುಗಗಳಲ್ಲಿ ಅವತರಿಸಿ ಲೋಕಕಲ್ಯಾಣಗೈದ ಮಹಾ ಪುರುಷರಾಗಿದ್ದಾರೆ. ವರ್ಗ ಭೇದ, ವರ್ಣ ಭೇದ, ಲಿಂಗಭೇದ, ಬಡವ, ಬಲ್ಲಿದ ಎಂಬ ತಾರ ತಮ್ಯವನ್ನು ಮಾಡದೇ ಎಲ್ಲರಿಗೂ ಧಾರ್ಮಿಕ, ಸಾಮಾಜಿಕ, ಸ್ವಾತಂತ್ರವನ್ನು ಲಿಂಗಧಾರಣೆಯ ಮುಖಾಂತರ ಪಡೆಯುವರೆಂಬ ದಿವ್ಯ ಸಂದೇಶವನ್ನು ಶ್ರೀ ಜಗದ್ಗುರು ಪಂಚಾಚಾರ್ಯರು ನೀಡಿದ್ದಾರೆ.
ಶ್ರೀ ಪಂಚಾಚಾರ್ಯರ ದಿವ್ಯ ಸಂದೇಶವನ್ನು ಎಲ್ಲ ಕಡೆಗೆ ಪ್ರಸಾರವಾಗಬೇಕು ಅದಕ್ಕಾಗಿ ತಾವೆಲ್ಲರೂ ಮುಂದೆ ಬರಬೇಕೆಂದು ಶ್ರೀ ಕಾಶಿ ಜಗದ್ಗುರುಗಳು ಹೇಳಿದರಲ್ಲದೇ ನಾವು ದೇಶಾದ್ಯಂತವಾಗಿ ಧರ್ಮ ಸಂಚಾರವನ್ನು ಮಾಡುವಂತಹ ಸಂದರ್ಭದಲ್ಲಿ ಅನೇಕ ಮಹಾತ್ಮರ ಹೆಸರಿನಲ್ಲಿ ವೃತ್ತಗಳಿರುವುದನ್ನು ನೋಡಿದಾಗ ಪಂಚಾಚಾರ್ಯ ವೃತ್ತ ಸ್ಥಾಪಿಸಬೇಕೆಂದು ಮನದಲ್ಲಿ ಮೂಡುತಿತ್ತು. ಅದೊಂದು ಕೊರಗು ಸದಾಕಾಲ ಮನದಲ್ಲಿ ಕಾಡುತಿತ್ತು. ಬಹುದಿನಗಳ ಆ ಕೊರಗು ಇಂದು ಪೂರ್ಣ ನಿವಾರಣೆಯಾಗಿ ಪೂರ್ಣಗೊಂಡಿದೆ. ನಮ್ಮಗೆ ಹೇಳ ತೀರದ ಸಂತೋಷವಾಗಿದೆ.
ಇದು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಪಂಚಾಚಾರ್ಯ ವೃತ್ತವಾಗಿದ್ದು ಈ ಐತಿಹಾಸಿಕ ಅಪೂರ್ವ ಕಾರ್ಯವನ್ನು ತಮ್ಮ ನೆಚ್ಚಿನ ಶಿಷ್ಯರೊಂದಿಗೆ ಮಾಡಿರುವ ಬೇಮಳಖೇಡ ಹಿರೇಮಠದ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರ ಕಾರ್ಯ ಅವಿಸ್ಮರಣೆಯ ಮತ್ತು ಚಾರಿತ್ರಿಕವಾಗಿದೆ ಎಂದು ಶ್ರೀ ಸನ್ನಿಧಿಯವರು ಹೇಳಿ ಎಲ್ಲರಿಗೂ ಆಶೀರ್ವದಿಸಿದರು.
ಈ ಸ್ಮರಣೀಯ ಶುಭ ಸಂದರ್ಭದಲ್ಲಿ ಶ್ರೀ ಕಾಶಿ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯರು ಈ ಮಹಾಕಾರ್ಯ ಮಾಡಿದ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರಿಗೆ ಚಿನ್ನದ ಉಂಗುರವನ್ನಿಟ್ಟು ಆಶೀರ್ವದಿಸಿದರು. ಈ ಪವಿತ್ರ ಕಾರ್ಯಕ್ಕಾಗಿ ಹಗಲಿರಳು ಸೇವೆ ಮಾಡಿದ ಬುಧೇರಾದ ರಾಜಕುಮಾರ ಸಜ್ಜನ, ಜಗನ್ನಾಥರವರಿಗೆ ಶ್ರೀ ಜಗದ್ಗುರುಗಳು ಗುರು ರಕ್ಷೆ ನೀಡಿ ಹರಸಿದ್ದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಮಹಾದೇವಪ್ಪ ಭಂಗೊರೆ, ಶಿವಯ್ಯ ಸ್ವಾಮಿ, ಕಂಟೆಪ್ಪ ಭಂಗೊರೆ, ಸಂಗಮೇಶ ಹುಮನಾಬಾದೆ, ಮಹಾಂತೇಶ ಡೊಂಗರಗಿ, ಗಂಗಾಧರ ಧನ್ನೂರ, ಶಾಂತಮ್ಮ ಸ್ವಾಮಿ, ಓಂಕಾರ ಸ್ವಾಮಿ, ಶಂಕರ ಚೊಂಡಿ, ಜಗದೀಶ ಸ್ವಾಮಿ, ಚಂದ್ರಪ್ಪ ಭಂಗೊರೆ, ಕುಬೇರಪ್ಪ ಗೌಡರು, ನಾಗಯ್ಯಾ ಚೊಂಡಿ, ಬಸವರಾಜ ಭಂಗೊರೆ,ವೀರಶೇಶ ಸ್ವಾಮಜ, ತೇಜೊರಾವ, ಉಮೇಶ ಗೌರಶೆಟ್ಟಿ ಮುಂತಾದ ಗಣ್ಯರು ಮಹಿಳೆಯರು ಇದ್ದರು.