ಬೀದರನಲ್ಲಿ ಬಸವ ನಡಿಗೆ 20ಕ್ಕೆ

ಬೀದರ್: ಎ.18:ಬಸವ ಜಯಂತಿ ಅಂಗವಾಗಿ ನಗರದಲ್ಲಿ ಏಪ್ರಿಲ್ 20 ರಂದು ‘ಬಸವ ನಡಿಗೆ’ ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ಬಸವ ಜಯಂತಿಯನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ದಿಸೆಯಲ್ಲಿ ಬಸವ ನಡಿಗೆ ಆಯೋಜನೆಗೆ ನಿರ್ಧರಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.

20 ರಂದು ಸಂಜೆ 5ಕ್ಕೆ ನಗರದ ಬಸವ ಮುಕ್ತಿ ಮಂದಿರದಿಂದ ಬಸವೇಶ್ವರ ವೃತ್ತದ ವರೆಗೆ ಬಸವ ನಡಿಗೆ ನಡೆಯಲಿದೆ. ಬಸವಾನುಯಾಯಿಗಳು ಶುಭ್ರ ಬಟ್ಟೆ, ಸ್ಕಾರ್ಪ್ ಧರಿಸಿ, ಕೈಯಲ್ಲಿ ಷಟ್‍ಸ್ಥಲ ಧ್ವಜ ಹಿಡಿದು ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಬಸವ ಜಯಂತಿ ಪ್ರಯುಕ್ತ ಏಪ್ರಿಲ್ 21 ರಿಂದ 23 ರ ವರೆಗೆ ನಗರದಲ್ಲಿ ನಡೆಯಲಿರುವ ಬೈಕ್ ರ್ಯಾಲಿ, ವಚನ ಸಂಗೀತೋತ್ಸವ ಹಾಗೂ ಮೆರವಣಿಗೆಯಲ್ಲಿ ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಬಸವ ನಡಿಗೆ ಪ್ರಚಾರ: ನಗರದ ಎಲ್‍ಐಜಿ ಹುಡ್ಕೋ ಕಾಲೊನಿಯಲ್ಲಿ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವ ನಡಿಗೆ ಹಾಗೂ ಬಸವ ಜಯಂತಿ ಉತ್ಸವದ ಪ್ರಚಾರ ಮಾಡಲಾಯಿತು.

ಮನೆ ಮನೆಗೆ ಕರ ಪತ್ರ ವಿತರಿಸಿ, ಭಜನ, ವಚನ ಗಾಯನದೊಂದಿಗೆ ಮೆರವಣಿಗೆ ನಡೆಸಿ, ಬಸವ ನಡಿಗೆ ಹಾಗೂ ಬಸವ ಜಯಂತಿ ಉತ್ಸವದ ಕಾರ್ಯಕ್ರಮಗಳಿಗೆ ಬಸವಾನುಯಾಯಿಗಳು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಯಿತು.

ಬಸವ ಜಯಂತಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ ಚನಶೆಟ್ಟ, ಬಸವ ಜಯಂತಿ ಉತ್ಸವ ಸಮಿತಿಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಸುವರ್ಣಾ ಚಿಮಕೋಡೆ, ಅಧ್ಯಕ್ಷೆ ನೀಲಮ್ಮ ರೂಗನ್ ಮೊದಲಾದವರು ಪಾಲ್ಗೊಂಡಿದ್ದರು.