ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಬೇಕು

ದಾವಣಗೆರೆ.ಮೇ.೫: ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷದ ಸರ್ಕಾರಗಳು ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸಬೇಕು. ಜತೆಗೆ 2ಬಿ ಮೀಸಲಾತಿಯನ್ನು ಮತ್ತೆ ಜಾರಿ ಮಾಡಬೇಕು. ಮಾತ್ರವಲ್ಲದೇ ಸಾಚಾರ್ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ನ ಆಗ್ರಹಿಸಿದೆ.ನಗರದ ರೋಟರಿ ಬಾಲಭವನದಲ್ಲಿ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಆಯೋಜಿಸಲಾಗಿದ್ದ ಮತದಾನದ ಮಹತ್ವ, ಮಹಿಳಾ ರಾಜಕೀಯ ಪ್ರಾತಿನಿಧ್ಯ, ಬೀಡಿ ಕಾರ್ಮಿಕ ಮಹಿಳೆಯರ ಹಕ್ಕೊತ್ತಾಯಗಳ ವಿಚಾರ ಸಂಕಿರಣದಲ್ಲಿ ಹಲವು ಅಂಶಗಳ ನಿರ್ಣಯ ಕೈಗೊಂಡಿದೆ.ದಾವಣಗೆರೆ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯನ್ನು ಪಿಪಿಪಿ ಮಾದರಿಯಲ್ಲಿ ಖಾಸಾಗೀಕರಣ ಮಾಡದಬಾರದು ಮತ್ತು ಉತ್ತಮ ಉಚಿತ ಆರೋಗ್ಯ ಸೇವೆಯನ್ನು ಒದಗಿಸಬೇಕು. ದಾವಣಗೆರೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು. ವಿಧಾನ ಸಭೆ, ಲೋಕಸಭೆಗೆ ಶೇ. 33ರಷ್ಟು ಮಹಿಳೆಯರಿಗೆ ಮೀಸಲಾತಿಯನ್ನು ನೀಡಬೇಕು.ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕು. ಬೀಡಿ ಲೇಔಟಿನಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಪುನರ್ಚೇತನಗೊಳಿಸಿ ಬೀಡಿ ಕಾರ್ಮಿಕರಿಗೆ ಆರೋಗ್ಯ ಸೇವೆ ಒದಗಿಸಬೇಕು. ಬೀಡಿ ಕಾರ್ಮಿಕರಿಗೆ ವಸತಿ, ನಿವೇಶನ ಕೊಡಬೇಕು. ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಅಕ್ಕಿ ಜೊತೆಗೆ ಇತರೆ ಬೇಳೆ ಕಾಳುಗಳನ್ನು ಒದಗಿಸಬೇಕು. ಇದಲ್ಲದೇ ಹಕ್ಕು ಪತ್ರ ಇಲ್ಲದೆ ಇರುವ ಸ್ಲಂ ಮತ್ತು ನಗರ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.ಈ ವೇಳೆ ಧಾರವಾಡದ ಬರಹಗಾರರಾದ ಶಾರದ ಗೋಪಾಲ ದಾಬಡೆ, ಲೇಖಕ ಇಮ್ಮಿಯಾಜ್ ಹುಸೇನ್, ಎಂ.ಕರಿಬಸಪ್ಪ ಇತರರು ಇದ್ದರು.