ಬೀಡಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ

ದಾವಣಗೆರೆ.ಜೂ.೭: ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಬೀಡಿ ಕಾರ್ಮಿಕರಿಗೆ ನೆರಳು ಬೀಡಿ ಕಾರ್ಮಿಕರ ವತಿಯಿಂದ ಆಹಾರ ಧಾನ್ಯದ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನ್ಯಾಯವಾದಿ ಅರುಣ್ ಕುಮಾರ್ ಪ್ರಶಂಸಿದರು.  ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಬೀಡಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಗೆ ಎಸ್‌ಎಸ್‌ಎಂ ನಗರದಲ್ಲಿ ಚಾಲನೆ ನೀಡಲಾಯಿತು. ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಜನರ ಸಹಾಯ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ದೈನಂದಿನ ಬದುಕಿನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿರುವ ಜನರಿಗೆ ಪ್ರತಿಯೊಬ್ಬರು ಸಹಾಯ ಮಾಡುವುವುದ ಇಂದಿನ ಅಗತ್ಯವಾಗಿದೆ. ಕರೋನಾ ತಲ್ಲಣದ ಸಂದರ್ಭದಲ್ಲಿ ಬಡ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಅಂದೇ ದುಡಿದು ಅಂದೇ ಊಟ ಮಾಡುವ ಜನರಿಗೆ ಬಹಳ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಅಂತಹ ಜನರ ಸಹಾಯಕ್ಕೆ ಬರಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದರು. ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಮಾತನಾಡಿ, ನಗರದಲ್ಲಿರುವ ಬೀಡಿ ಕಾರ್ಮಿಕರ ಬದುಕು ದುಸ್ತರವಾಗಿದೆ. ನೆರಳ ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಎಲ್ಲ ಬೀಡಿ ಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಯೂನಿಯನ್ ಕಾರ್ಯದರ್ಶಿ ಕರಿಬಸಪ್ಪ ಎಂ, ಪದಾಧಿಕಾರಿಗಳಾದ ನಾಹೇರ್ ಬಾನು, ಶಿರಿನ್ ಬಾನು, ನೂರ್ ಪಾತಿಮಾ, ಸಬರೀನ್ ತಾಜ್, ನಗೀನಾ ಬಾನು ಮುಂತಾದವರು ಉಪಸ್ಥಿತರಿದ್ದರು.