ಬೀಟ್ ರೂಟ್ ನಲ್ಲಿದೆ ಔಷಧೀಯ ಗುಣ!

ನಮ್ಮಲ್ಲಿ ಕೆಲವರಿಗೆ ಕೆಲವೊಂದು ತರಕಾರಿಗಳು ಆಗಿ ಬರುವುದಿಲ್ಲ. ಕೆಲವರಿಗೆ ಹಾಗಲಕಾಯಿ ಕಂಡರೆ ಆಗದಿದ್ದರೆ ಮತ್ತೆ ಕೆಲವರಿಗೆ ಬದನೆಕಾಯಿ, ಬೀಟ್ ರೂಟ್ ಈ ರೀತಿಯ ತರಕಾರಿಗಳನ್ನು ತಿನ್ನಲು ಇಷ್ಟವಾಗುವುದಿಲ್ಲ. ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ದೊರೆಯಲು ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಬೇಕು. ಏಕೆಂದರೆ ಎಲ್ಲಾ ಬಗೆಯ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಒಂದೇ ಬಗೆಯ ಆಹಾರದಲ್ಲಿ ಇರುವುದಿಲ್ಲ. ಅದರಲ್ಲೂ ಕೆಲವು ತರಕಾರಿಗಳು ಔಷಧೀಯ ಗುಣವನ್ನು ಹೊಂದಿದೆ. ಉದಾಹರಣೆಗೆ ಬೀಟ್ ರೂಟ್. ಬೀಟ್ ರೂಟ್ ತಿಂದರೆ ಈ ಕೆಳಗಿನ ಪ್ರಮುಖ ಆರೋಗ್ಯಕರ ಗುಣಗಳನ್ನು ಪಡೆಯಬಹುದು.
ದೇಹಕ್ಕೆ ಶಕ್ತಿ ನೀಡುತ್ತದೆ: ಬೀಟ್ ರೂಟ್ ನಲ್ಲಿ ಕಾರ್ಬೋಹೈಡ್ರೇಟ್ ಅಧಿಕವಿರುವುರುವುದರಿಂದ ಇದನ್ನು ತಿಂದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ. ಸುಸ್ತು, ತಲೆಸುತ್ತು ಈ ರೀತಿಯ ಸಮಸ್ಯೆ ಕಂಡು ಬಂದರೆ ಬೀಟ್ ರೂಟ್ ಜ್ಯೂಸ್ ಕುಡಿದರೆ ಸಾಕು ಕಡಿಮೆಯಾಗುವುದು.
ಅಧಿಕ ಫಾಲಿಕ್ ಆಸಿಡ್: ಫಾಲಿಕ್ ಆಸಿಡ್ ಆರೋಗ್ಯಕ್ಕೆ ತುಂಬಾ ಅಗತ್ಯ. ಇದು ಜೀವಕಣಗಳ ಉತ್ಪತ್ತಿ ಹೆಚ್ಚಾಗಲು ಸಹಾಯ ಮಾಡುತ್ತದೆ. ಫಾಲಿಕ್ ಆಸಿಡ್ ಕೊರತೆ ಇರುವವರು ಮಾತ್ರೆ ತೆಗೆದುಕೊಳ್ಳುವ ಬದಲು ಪ್ರತಿನಿತ್ಯ ಬೀಟ್ ರೂಟ್ ಅನ್ನು ಜ್ಯೂಸ್ ಮಾಡಿ ಕುಡಿದರೆ ಸಾಕು.
ಪೋಷಕಾಂಶಗಳು: ಬೀಟ್ ರೂಟ್ ನಲ್ಲಿ ವಿಟಮಿನ್ ಎ, ಸಿ, ಬೇಟೈನ್, ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ರಂಜಕ, ನೈಸಿನ್ ಮತ್ತು ಕಬ್ಬಿಣದಂಶ ಅಧಿಕವಿರುತ್ತದೆ.
ಹೃದಯ ಸ್ವಾಸ್ಥ್ಯಒಳ್ಳೆಯದು: ಬೀಟ್ ರೂಟ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಬೀಟ್ ರೂಟ್ ದೇಹದಲ್ಲಿ ರಕ್ತಸಂಚಾರ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಬೀಟ್ ರೂಟ್ ನಲ್ಲಿರುವ ಬೇಟೈನ್ ಅಂಶ ದೇಹದಲ್ಲಿರುವ ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ.
ರಕ್ತ ಹೀನತೆ ನಿವಾರಿಸುತ್ತದೆ: ರಕ್ತ ಹೀನತೆ ಸಮಸ್ಯೆ ಇರುವವರು ಪ್ರತಿನಿತ್ಯ ಬೀಟ್ ರೂಟ್ ಜ್ಯೂಸ್ ಕುಡಿಯುವುದು, ಬೀಟ್ ರೂಟ್ ನಿಂದ ಪದಾರ್ಥಗಳನ್ನು ತಯಾರಿಸಿ ತಿನ್ನಬೇಕು. ಈ ರೀತಿ ಮಾಡಿದರೆ ದೇಹದಲ್ಲಿ ರಕ್ತಕಣಗಳು ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಡಿಮೆಯಾಗುವುದು.
ಆದ್ದರಿಂದ ಬೀಟ್ ರೂಟ್ ತಿನ್ನಲು ಇಷ್ಟವಿರಲಿ ಅಥವಾ ಇಲ್ಲದಿರಲಿ, ಆದರೆ ಇದನ್ನು ಕಡ್ಡಾಯವಾಗಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಆರೋಗ್ಯಕ್ಕೆ ಒಳ್ಳೆಯದು.