ಬೀಜ ವಿತರಣೆ: ಸದುಪಯೋಗಕ್ಕೆ ಕರೆ

ಬ್ಯಾಡಗಿ, ಮೇ 29: ರೈತರಿಗೆ ಸರಕಾರ ಸಬ್ಸಿಡಿ ದರದಲ್ಲಿ ಬೀಜ ವಿತರಿಸುತ್ತಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ ಹೇಳಿದರು.
ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಬೀಜ ವಿತರಣೆ ಕೇಂದ್ರವನ್ನು ತೆರೆಯಲಾಗಿದೆ. ಕೇಂದ್ರದಲ್ಲಿ ಅಗತ್ಯ ಪ್ರಮಾಣದಲ್ಲಿ ಬೀಜ ದಾಸ್ತಾನು ಮಾಡಲಾಗಿದ್ದು, ಬೀಜಗಳ ಅಭಾವ ಕುರಿತು ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಕೇಂದ್ರದಿಂದ ವಿತರಿಸುವ ಬೀಜಗಳು ಹಾಗೂ ದರವನ್ನು ವಿವರಿಸಿದರು. ರೈತರು ಯಾವುದೇ ಆತಂಕ ಪಡದೇ ಕೋವಿಡ್ ಮಾರ್ಗಸೂಚಿ ಅನ್ವಯ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡದಂತೆ ನೋಡಿಕೊಂಡು ತಮಗೆ ಅವಶ್ಯವಿರುವ ಬೀಜ ಪಡೆಯಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಕಾಳಮ್ಮ ಪಂಚಾನನ, ಸದಸ್ಯರಾದ ಮೂಕಪ್ಪ ಚನ್ನಗೌಡ್ರ, ನಂದಾ ಪೂಜಾರ, ಕೃಷಿ ಸಹಾಯಕ ಅಧಿಕಾರಿಗಳಾದ ಶಿವಣ್ಣ ಮರಬಸಣ್ಣನವರ, ಕೆ.ಬಿ.ಹಿರೇಹಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.