ಬೀಜ ವಿತರಣೆಗೆ ಶಾಸಕ ಚರಂತಿಮಠ ಚಾಲನೆ

ಬಾಗಲಕೋಟೆ,ಮೇ.28 : ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ನವನಗರದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆಗೆ ಶಾಸಕ ವೀರಣ್ಣ ಚರಂತಿಮಠ ಸಾಂಕೇತಿಕವಾಗಿ ಗುರುವಾರ ಚಾಲನೆ ನೀಡಿದರು.
ಬಾಗಲಕೋಟೆ ಹೋಬಳಿ ಮಟ್ಟದ ರೈತರಿಗೆ ನವನಗರದ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು, ತೊಗರಿ, ಸಜ್ಜೆ, ಸೂರ್ಯಕ್ರಾಂತಿ, ಗೋವಿನ ಜೋಳದ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಜೂನ್ 1 ರಿಂದ ರಾಂಪೂರ ಮತ್ತು ಕಲಾದಗಿ ಹೋಬಳಿ ಮಟ್ಟದಲ್ಲಿ ಬೀಜ ವಿತರಣೆ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು. ರೈತರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬೇಕು. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿಯೂ ಸಹ ಸಾಮಾಜಿಕ ಅಂತರ ಪಾಲನೆ ಅನುಸರಿಸುವಂತೆ ರೈತರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಲವೊಂದು ರೈತರಿಗೆ ಸಾಂಕೇತಿಕವಾಗಿ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ಕೃಷಿ ಉಪ ನಿರ್ದೇಶಕ ಎಸ್.ಬಿ.ಕೊಂಗವಾಡ, ಸಹಾಯಕ ಕೃಷಿ ನಿರ್ದೇಶಕ ಪಾಂಡಪ್ಪ ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.