ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಗುಣಮಟ್ಟ ಕಾಪಾಡಿ:ಬಿ.ಫೌಜಿಯಾ ತರನ್ನುಮ್

ಕಲಬುರಗಿ,ಜೂ.22: ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಎರಡ್ಮೂರು ದಿನದಲ್ಲಿ ಜಿಲ್ಲೆಗೆ ಮುಂಗಾರು ಮಳೆ ಬರುವ ಸಾಧ್ಯತೆ ಇದ್ದು, ಜುಲೈ ಮೊದಲನೇ ವಾರದಲ್ಲಿ ಬಿತ್ತನೆ ಶುರುವಾಗಬಹುದು. ಹೀಗಾಗಿ ಕೃಷಿ ಇಲಾಖೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂಗಾರು ವಿಳಂಬ ಹಿನ್ನೆಲೆಯಲ್ಲಿ ಕೃಷಿ ಬಿತ್ತನೆ, ಕುಡಿಯುವ ನೀರು, ಮೇವು ಸಂಗ್ರಹಣೆ ಕುರಿತ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೀಜ ವಿತರಣೆ ಸಂದರ್ಭದಲ್ಲಿ ಗಲಾಟೆಯಾಗದಂತೆ ರೈತ ಸಂಪರ್ಕ ಕೇಂದ್ರದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಕಳಪೆ ಬೀಜ ವಿತರಣೆಯಾಗದಂತೆ ಎಚ್ಚರ ವಹಿಸಬೇಕು. ಅಗತ್ಯಕ್ಕನುಗುಣವಾಗಿ ಬೀಜ ದಾಸ್ತಾನು ಮಾಡಿಕೊಳ್ಳಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ ಜೂನ್ 1 ರಿಂದ ಇಲ್ಲಿಯ ವರೆಗೆ ವಾಡಿಕೆಯಂತೆ 78 ಮಿ.ಮಿ ಮಳೆಯಾಗಬೇಕಿತ್ತು. ಬಿದ್ದಿರುವ ಮಳೆ ಪ್ರಮಾಣ 24 ಮಿ.ಮಿ ಮಾತ್ರ. ಮುಂಗಾರು ಮಳೆ ವಿಳಂಬ ಕಾರಣ ಜಿಲ್ಲೆಯಲ್ಲಿ 8.87 ಲಕ್ಷ ಹೆಕ್ಟೇರ್ ಪೈಕಿ 25,928 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. 28,300 ಕ್ವಿಂಟಾಲ್ ಬೀಜ ದಾಸ್ತಾನಿದೆ. ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಸಹ ಇದ್ದು, ಯಾವುದೇ ತೊಂದರೆಯಿಲ್ಲ. ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂಮರ್ ಮಾತನಾಡಿ, 27 ಸಾವಿರ ಹೆಕ್ಟೇರ್ ಪ್ರದೇಶ ಪೈಕಿ ಕೇವಲ ಶೇ.4ರಷ್ಟು ಪ್ರದೇಶದಲ್ಲಿ ಮಾತ್ರ ತೋಟಗಾರಿಕೆ ಬೆಳೆ ಬೆಳೆಯಲಾಗಿದೆ ಎಂದರು. ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ ಮಾತನಾಡಿ, ಮುಂದಿನ 24 ವಾರಕ್ಕೆ ಬೇಕಾಗುವಷ್ಟು ಜಾನುವಾರಿಗಳಿಗೆ ಮೇವು ಸಂಗ್ರಹವಿದೆ, ಮೇವಿನ ಸಮಸ್ಯೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಪರಿಶೀಲನೆ ಸಂದರ್ಭದಲ್ಲಿ ಪಿ.ಎಂ.ಕಿಸಾನ್ ಯೋಜನೆಯಡಿ ಇ.ಕೆ.ವೈ.ಸಿ ಇನ್ನು ಶೇ.28 ಬಾಕಿ ಇರುವುದನ್ನು ಗಮನಿಸಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಇ.ಕೆ.ವೈ.ಸಿ. ಮಾಡಲು ಇದೇ ಜೂನ್ 30 ಕೊನೆ ದಿನ ಇರುವುದರಿಂದ ಆಂದೋಲನ ರೂಪದಲ್ಲಿ ಈ ಕಾರ್ಯ ಮಾಡಬೇಕು. ಯಾವುದೇ ಕಾರಣಕ್ಕು ರೈತರು ಆರ್ಥಿಕ ಸಹಾಯಧನದಿಂದ ವಂಚಿತರಾಗಬಾರದು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದಲ್ಲದೆ, ಇತರೆ ಸಂಬಂಧಿತ ಇಲಾಖೆಗಳು ಇದಕ್ಕೆ ಸಹಕರಿಸಬೇಕು ಎಂದರು.
ಕುಡಿಯುವ ನೀರಿಗೆ ಮೊದಲ ಆದ್ಯತೆ: ಕುಡಿಯುವ ನೀರು ಪೂರೈಕೆ ನಮ್ಮ ಮೊದಲ ಆದ್ಯತೆಯಾಗಬೇಕು. ಮಳೆ ಇನ್ನು ವಿಳಂಬವಾದಲ್ಲಿ ಪ್ರತಿ 2 ದಿನಕ್ಕೊಮ್ಮೆಯಾದರು ಜಿಲ್ಲೆಯ ಜನತೆಗೆ ಕುಡಿಯುವ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ವಿಶೇಷವಾಗಿ ಗ್ರಾಮೀಣ ಭಾಗ ಮತ್ತು ಪಟ್ಟಣ ಪ್ರದೇಶದಲ್ಲಿ ಬೋರವೆಲ್ ಕೊರೆಯಲು ಈಗಿನಿಂದಲೆ ಸ್ಥಳ ಗುರುತು ಮಾಡಿಟ್ಟುಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಇರೋ ಗ್ರಾಮ, ಪಟ್ಟಣಕ್ಕೆ ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎ.ಇ.ಇ. ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಡಿ.ಸಿ. ಹೇಳಿದರು.
ಆಳಂದ ತಾಲೂಕಿನ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ ಪ್ರಸ್ತುತ ಖಣದಾಳ, ಕಣಮಸ್, ಮಟಕಿ, ನಿರಗುಡಿ, ಜೀರೊಳ್ಳಿ, ಸರಸಂಬಾ, ಹಾಲತಡಕಲ್ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು, ಇಲ್ಲಿ ಖಾಸಗಿ ಬೋರವೆಲ್, ತೆರೆದ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಇನ್ನು ಮಳೆ ಬರದೆ ಹೋದಲ್ಲಿ ಮುಂದಿನ ದಿನದಲ್ಲಿ ಕವಲಗಾ, ಬೋಧನ, ಜಂಬಗಾ ಸೇರಿ ಇತರೆ ಗ್ರಾಮದಲ್ಲಿ ಸಮಸ್ಯೆ ಉದ್ಭವಹಿಸಬಹುದು ಎಂದರು. ಈ ಸಂದರ್ಭದಲ್ಲಿ ಜಿ.ಪಂ. ಸಿ.ಇ.ಓ ಭಂವಾರ್ ಸಿಂಗ್ ಮೀನಾ ಮಾತನಾಡಿ, ಬೋರವೆಲ್ ಕೊರೆಯುವ ಸಂದರ್ಭದಲ್ಲಿ ಸರ್ಕಾರದ ಜಮೀನಿಗೆ ಪ್ರಥಮಾದ್ಯತೆ ಕೊಡಬೇಕು. ಖಾಸಗಿ ಜಮೀನಿನಲ್ಲಿ ಕೊರೆದು ಮುಂದೆ ಅನಗತ್ಯ ಸಮಸ್ಯೆಗೆ ಎಡೆಮಾಡಕೊಡದಿರಿ. ಕುಡಿಯುವ ನೀರು ಪೂರೈಕೆಗೆ 1 ಕೋಟಿ ರೂ.ಅನುದಾನ ಲಭ್ಯವಿದೆ. ಅನುದಾನ ಕೊರತೆ ಇಲ್ಲ. ಅಗತ್ಯ ಇದ್ದ ಕಡೆ ಬೋರವೆಲ್ ಫ್ಲಶ್, ಡ್ರಿಲ್ಲಿಂಗ್ ಮಾಡಿಸಬೇಕು ಎಂದರು.
ಅಫಜಲಪೂರ ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ವಿಭಾಗಕ್ಕೆ ಕುಡಿಯುವ ನೀರು ಪೂರೈಕೆಗೆ ಸೊನ್ನ ಬ್ಯಾರೇಜಿನಿಂದ ನೀರಿ ಬಿಡುಗಡೆ ಮಾಡಬೇಕು ಎಂದು ತಾಲೂಕಿನ ತಹಶೀಲ್ದಾರ ಸಂಜೀವಕುಮಾರ ದಾಸರ್, ಪುರಸಭೆ ಮುಖ್ಯಾಧಿಕಾರಿಗಳು ಡಿ.ಸಿ. ಗಮನಕ್ಕೆ ತಂದರು. ಇದಕ್ಕೆ ಸಮ್ಮತ್ತಿಸಿದ ಡಿ.ಸಿ., ಈ ಸಂಬಂಧ ಕೂಡಲೆ ಪ್ರಸ್ತಾವನೆ ಕೊಡಿ ನಾಳೆನೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ನೀರು ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದರು.
ಕುಡಿಯುವ ನೀರು ಯೋಜನೆಗೆ ವಿದ್ಯುತ್ ಸಂಪರ್ಕ ಕೂಡಲೆ ಕಲ್ಪಿಸಿ: ಕುಡಿಯುವ ನೀರು ಕುರಿತ ಚರ್ಚೆಯಲ್ಲಿ ಆಳಂದ ತಾಲೂಕಿನ ಗಡಿ ಗ್ರಾಮ ಸರಸಂಬಾದಲ್ಲಿ ನಿಯಮಿತ ವಿದ್ಯುತ್ ಪೂರೈಕೆ ಇಲ್ಲದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ತಾ.ಪಂ ಇ.ಓ. ಮತ್ತು ಜಿ.ಪಂ. ಸಿ.ಇ.ಓ ಸಭೆಯ ಗಮನ ಸೆಳೆದಾಗ ಕೂಡಲೆ ಸದರಿ ಗ್ರಾಮಕ್ಕೆ ಪ್ರತಿದಿನ 8 ರಿಂದ 10 ಗಂಟೆ ವಿದ್ಯುತ್ ಪೂರೈಸಬೇಕು. ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ಕೂಡಲೆ ಕಲ್ಪಿಸಬೇಕು. ಅನಗತ್ಯ ವಿಳಂಬ ಮಾಡಬಾರದು ಎಂದು ಜೆಸ್ಕಾಂ ಇ.ಇ. ಅವರಿಗೆ ಡಿ.ಸಿ. ನಿರ್ದೇಶನ ನೀಡಿದರು.
ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿ: ಮಳೆ ಬಂದ ನಂತರ ಸಹಜವಾಗಿ ನೀರು ಮಣ್ಣು ಮಿಶ್ರಿತದಿಂದ ಕೂಡಿ ನಲ್ಲಿಯಲ್ಲಿ ಕಲುಷಿತ ನೀರು ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ನೀರು ಶುದ್ಧೀಕರಿಸಿ, ಲ್ಯಾಬ್‍ನಿಂದ ಪರೀಕ್ಷಿಸಿಯೇ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ಕಲುಷಿತ ನೀರು ಸೇವನೆಯಿಂದ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಡಿ.ಸಿ. ತಿಳಿಸಿದರು. ಜಿ.ಪಂ. ಸಿ.ಇ.ಓ ಭಂವಾರ್ ಸಿಂಗ್ ಮೀನಾ ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ಚರಂಡಿ ನೀರು ಸೇರದಂತೆ ತುಂಬಾನೆ ಎಚ್ಚರ ವಹಿಸಿ ಎಂದರು.
ಕಲಬುರಗಿ ನಗರಕ್ಕೆ 0.2 ಟಿ.ಎಂ.ಸಿ. ಬಿಡುಗಡೆ: ಬೆಣ್ಣೆತೋರಾ, ಕೆರಿ ಭೋಸಗಾ, ಸರಡಗಿ ಬ್ಯಾರೇಜಿನಿಂದ ಕಲಬುರಗಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನಗರದ ಪ್ರತಿ ದಿನದ ಬೇಡಿಕೆ 95 ಎಂ.ಎಲ್.ಡಿ. ಇದ್ದು, ಪ್ರಸ್ತುತ 85 ಎಂ.ಎಲ್.ಡಿ. ಪೂರೈಸಲಾಗುತ್ತಿದೆ. ಜೂನ್ 20ಕ್ಕೆ ನಾರಾಯಣಪುರ ಜಲಾಶಯದಿಂದ 0.2 ಟಿ.ಎಂ.ಸಿ. ನೀರು ಬಿಟ್ಟಿದ್ದು, ಮುಂದಿನ 2 ದಿನದಲ್ಲಿ ಸರಡಗಿ ಬ್ಯಾರೇಜಿಗೆ ತಲುಪಲಿದೆ. ಮುಂದಿನ ದಿನಗಳಲ್ಲಿ ಮಳೆಯಾಗದೆ ಹೋದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಕೆ.ಯು.ಐ.ಡಿ.ಎಫ್.ಸಿ ಇ.ಇ. ಶಿವಕುಮಾರ ಪಾಟೀಲ ಅವರು ಸಭೆ ಗಮನಕ್ಕೆ ತಂದರು. ಮುಂಜಾಗ್ರತವಾಗಿ ಇನ್ನು 0.2 ಟಿ.ಎಂ.ಸಿ. ನೀರು ಬಿಡುಗಡೆಗೆ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಡಿ.ಸಿ. ತಿಳಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ಎಂ.ರಾಚಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.