ಬೀಜ ಬಿತ್ತನೆ ಸಮಯದಲ್ಲಿ ಬೀಜೋಪಚಾರ ಅವಶ್ಯ

ಸಂಜೆವಾಣಿ ವಾರ್ತೆಕುರುಗೋಡು:ಆ.11: ತೊಗರಿ ಬೆಳೆಯಲ್ಲಿ ‘ಸಮಗ್ರ ಕೀಟ ನಿರ್ವಹಣೆ’ ಭಾಗವಾಗಿ ಬಿತ್ತನೆ ಪೂರ್ವದಲ್ಲಿ ಪ್ರತಿ ಕೆಜಿ ಬೀಜಕ್ಕೆ 4 ಗ್ರಾಂ ಟ್ರೈಕೋಡರ್ಮಾ ಬೀಜೋಪಚಾರ ಮಾಡಿ ಬಿತ್ತನೆ ಕೈಗೊಂಡರೆ ನೆಟೆರೋಗದ ನಿರ್ವಹಣೆ ಮಾಡಬಹುದಾಗಿದೆ ಎಂದು ಕೃಷಿ ಅಧಿಕಾರಿ ಎಮ್. ದೇವರಾಜ ಹೇಳಿದರು.ತಾಲ್ಲೂಕಿನ ಮುಷ್ಟಗಟ್ಟೆ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ತೊಗರಿ ಬೆಳೆ ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಹಸಿರು ಕಾಯಿಕೊರಕದ ನಿರ್ವಹಣೆಗಾಗಿ ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 200 ಗ್ರಾಂ ಸೂರ್ಯಕಾಂತಿ/ಜೋಳದ ಕಾಳು ಮಿಶ್ರಣ ಮಾಡಿ ಬಿತ್ತಬೇಕು. ಇದರಿಂದ ಪಕ್ಷಿಗಳು ಕೂರಲು ಆಶ್ರಯ ಸಸ್ಯಗಳಾಗಿ ಸಹಕಾರಿಯಗುತ್ತವೆ. ಕೀಟಗಳ ಸಮೀಕ್ಷೆಗಾಗಿ ಪ್ರತಿ ಎಕರೆಗೆ ಎರಡು ಮೊಹಕ ಬಲೆಗಳನ್ನು ಅಳವಡಿಸಿ. ಆರ್ಥಿಕ ನಷ್ಠ ರೇಖೆಗೆ ಅನುಗುಣವಾಗಿ ಕೀಟ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು. ಮೊದಲನೆಯ ಸಿಂಪರಣೆಯಾಗಿ ತತ್ತಿನಾಶಕ ಕೀಟನಾಶಕವಾದ ಪ್ರೋಫೆನೊಪಾಸ್ ಕೀಟನಾಶಕವನ್ನು ಪ್ರತಿ ಲೀಟರ್‌ ನೀರಿಗೆ 2 ಮಿಲೀ ನಂತೆ ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದರು.ಎರಡನೆ ಸಿಂಪರಣೆಯಾಗಿ ನೂತನ ಕೀಟನಾಶಕವನ್ನು ಸಿಂಪಡಿಸಿ ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದುದು ಎಂದರು.ಮಣ್ಣಿನ ಆರೋಗ್ಯ ಹಾಗೂ ಮಣ್ಣು ಪರೀಕ್ಷೆಯ ಮಹತ್ವ ಮತ್ತು ಮಣ್ಣು ಆರೋಗ್ಯ ಕಾಪಾಡಲು ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಲು ತಿಳಿಸಿದರು.ತೊಗರಿ ಬೆಳೆಯಲ್ಲಿ ಕುಡಿ ಚಿವುಟುವಿಕೆ ಮಹತ್ವ,. ಕುಡಿ ಚಿವುಟುವಿಕೆಯಿಂದ ಗಿಡದಲ್ಲಿ ಪಂಗಲುಗಳು ಹೆಚ್ಚಾಗುತ್ತವೆ ಹಾಗೂ ಇದರಿಂದ ಕಾಯಿಗಳು ಹೆಚ್ಚಾಗುತ್ತವೆ ಹಾಗು ಇಳುವರಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.ರೈತರು ತೊಗರಿ, ಕಳೆನಾಶಕ ಹಾಗೂ ಕೀಟನಾಶಕಗಳ ಬಗ್ಗೆ ಕೃಷಿ ತಜ್ಞರೊಂದಿಗೆ ಮಾಹಿತಿ ಪಡೆದರು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.