ಬೀಜೋಪಚಾರ ಅತ್ಯವಶ್ಯ

ಗದಗ,ಜು6: ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳು, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ಪ್ರಮುಖ ವಾರ್ಷಿಕ ತೋಟಗಾರಿಕೆ ಬೆಳೆಗಳಾಗಿದ್ದು, ಜೂನ್ ಮೊದಲ ಹಾಗೂ ಎರಡನೆ ವಾರದಲ್ಲಿ ರೈತರು, ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದ್ದರಿಂದ ಕೃಷಿ ಬೆಳೆಗಳ ಬಿತ್ತನೆ ಅತೀ ಕಡಿಮೆಯಾಗಿದ್ದರಿಂದ, ರೈತರು ಮೆಣಸಿನಕಾಯಿ ಮತ್ತು ಈರುಳ್ಳಿ ಬಿತ್ತನೆ ಮಾಡಲು ನಿರ್ಧರಿಸಿದ್ದಾರೆ. ಈ ಸಾಲಿನಲ್ಲಿ ಮೆಣಸಿನಕಾಯಿಯನ್ನು ಸುಮಾರು 3250 ಹೆಕ್ಟರು ಕ್ಷೇತ್ರದಲ್ಲಿ, ಹಾಗೂ ಈರುಳ್ಳಿಯನ್ನು ಸುಮಾರು 2900 ಹೇಕ್ಟರು ಕ್ಷೇತ್ರದಲ್ಲಿ ಬೆಳೆಯುವ ಅಂದಾಜಿದೆ. ರೈತರು ಬೀಜದ ಕಂಪನಿ ಅಥವಾ ಡಿಲರುಗಳಿಂದ ಹಾಗೂ ತಾವೇ ಉತ್ಪಾದನೆ ಮಾಡಿದ ಅಥವಾ ಬೀಜೋತ್ಪಾದನೆ ಮಾಡಿದ ರೈತರಿಂದ ಖರೀದಿಸಿ, ಬಿತ್ತನೆ ಮಾಡುವುದು ಸಾಮಾನ್ಯವಾಗಿದೆ. ಬೆಳೆಗಳು ಕೀಟ ಮತ್ತು ರೋಗಗಳ ಬಾಧೆಗೆ ತುತ್ತಾಗದಂತೆ ರೈತರು ಮುಂಜಾಗ್ರತೆ ಕ್ರಮವಾಗಿ, ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಮಾಡುವುದು ಅತೀ ಅವಶ್ಯಕವಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುರೇಶ ವೀ ಕುಂಬಾರ ತಿಳಿಸಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ, ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಯ ಬೀಜೋಪಚಾರ ಮಾಡುವ ಪ್ರಾತ್ಯಕ್ಷತೆ ಮಾಡುವುದರ ಮುಖಾಂತರ ಈ ಬೆಳೆಗಳಿಗೆ ಬರುವ ಕೀಟ, ರೋಗಗಳು ಹಾಗೂ ಹತೋಟಿ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಈ ಬೆಳೆಗಳ ಬೀಜಗಳನ್ನು ರಾಸಾಯನಿಕ ಪದ್ಧತಿಯಲ್ಲಿ ಹಾಗೂ ಸಾವಯವ ಪದ್ಧತಿಯಲ್ಲಿ, ಬೀಜೋಪಚಾರ ಮಾಡಬಹುದು. ರಾಸಾಯನಿಕ ಪದ್ಧತಿಯಲ್ಲಿ, 2 ಗ್ರಾಂ ಪಾದರಸ ಸಂಯುಕ್ತ ವಸ್ತು ಅಥವಾ 2 ಮಿಮೀ ಇಮಿಡಾಕ್ಲೋಪ್ರಿಡ್ ಮತ್ತು ಮ್ಯಾಂಕೊಜೆಬ್ 2 ಗ್ರಾಂ. ಪ್ರತಿ 1 ಕಿಲೋ ಬೀಜಕ್ಕೆ ಉಪಚರಿಸಿ ನೆರಳಿನಲ್ಲಿ ಒಣಗಿಸಿ ನಂತರ ಬಿತ್ತನೆ ಮಾಡುವುದು. ಸಾವಯವ ಪದ್ಧತಿಯಲ್ಲಿಯಾದರೆ, ರೈಝೋಬಿಯಂ ಅಣು ಜೀವಿ 100 ಗ್ರಾಂ ಪ್ರತಿ ಕೆ.ಜಿ ಬೀಜಕ್ಕೆ ಲೇಪನ ಮಾಡಿ ನೆರಳಿನಲ್ಲಿ ಒಣಗಿಸಿ, ಬಿತ್ತನೆ ಮಾಡುವುದು. ಅಣು ಜೀವಿಗಳಾದ ಅಝಟೋಬ್ಯಾಕ್ವರ, ಟ್ರೈಕೋಡರ್ಮಾ (100 ಗ್ರಾಂ ಪ್ರತಿ ಕೆ.ಜಿ ಬೀಜಕ್ಕೆ) ಲೇಪನ ಮಾಡಿಯೂ ಬಿತ್ತನೆ ಮಾಡಬಹುದು ಎಂದು ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಬಾಪುಗೌಡ ಡಿ ಭರಮಗೌಡರ, ಶಿವಯ್ಯ ಮಠಪತಿ, ರಾಜನಗೌಡರ ಅಜ್ಜನಗೌಡರ, ಯಲ್ಲಪ್ಪ ಹಟ್ಟಿ, ಬಿ.ಎನ್.ನೀಲಗುಂದ, ಗ್ರಾಮ ಪಂಚಾಯತ ಸದಸ್ಯರಾದ ಶಿವಯೋಗಿ ಹೊಸಕೇರಿ, ಎಸ್‍ಎಸ್ ನಿಂಗನಗೌಡರ ಹೆಚ್ ಆರ್ ದೊಡ್ಡಗೌಡರ, ಮಾನೋಜಿ ಶಿಕ್ಷಕರು, ಇಲಾಖೆಯ ಅಧಿಕಾರಿಗಳಾದ ಎಂ ಆ0iÀiï ನಧಾಫ್, ಫಕ್ಕೀರಗೌಡ ಸಾತಪ್ಪನವರ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.