ಬೀಜೋಪಚಾರದ ಪ್ರಾಯೋಗಿಕ ಪ್ರದರ್ಶನ ರೈತರಲ್ಲಿ ಮನವರಿಕೆ ಕಾರ್ಯಕ್ರಮ

ಜೇವರ್ಗಿ:ಎ.1: ತಾಲ್ಲೂಕಿನ ಗಂವ್ಹಾರ ಗ್ರಾಮದ ಹಳೆ ಪಂಚಾಯಿತಿ ಆವರಣದಲ್ಲಿ ಗ್ರಾಮೀಣ ಕೃಷಿ ಕಾರ್ಯದಲ್ಲಿ ಭಾಗವಹಿಸಲು ಬಂದಿರುವ ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಅಂತಿಮ ವರ್ಷದ ವಿದ್ಯಾರ್ಥಿಗಳು, ಕೃಷಿ ಮಹಾವಿದ್ಯಾಲಯದ ಕೃಷಿ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಮೋಹನ ಚವ್ಹಾಣರವರ ನೇತೃತ್ವದಲ್ಲಿ ಬೀಜೋಪಚಾರದ ಮಾಹಿತಿಯ ಕಾರ್ಯಕ್ರಮವನ್ನು ನಡೆಸಿದರು.

ಬೀಜದಂತೆ ಬೆಳೆ ಆದ್ದರಿಂದ ಯಾವುದೇ ಬೆಳೆ ಬೆಳೆಯಬೇಕಾದರೆ ಬೀಜ ಮತ್ತು ಅದಕ್ಕೆ ಮಾಡುವ ಉಪಚಾರ ಮುಖ್ಯ. ವಿದ್ಯಾರ್ಥಿನಿಯಾದ ಚೈತ್ರ ಬೀಜೋಪಚಾರದ ಪ್ರಾಮುಖ್ಯತೆ ಮತ್ತು ಅದರ ಲಾಭಗಳ ಕುರಿತು ತಿಳಿಸಿದರು. ಬೀಜೋಪಚಾರ ಎಂದರೆ ಬೀಜಕ್ಕೆ ಮಾಡುವ ಉಪಚಾರ,ಆ ಮೂಲಕ ಬೀಜ ಹಾಗೂ ಸಸಿಯ ಸಂರಕ್ಷಣೆ ಮಾಡುವುದು ಅಥವಾ ಅಧಿಕ ಪೋಷಕಾಂಶ ಒದಗಿಸುವ ಕ್ರಿಯೆ. ಇದರ ಲಾಭಗಳು:ಮೊಳಕೆ ಪ್ರಮಾಣ ಮತ್ತು ಇಳುವರಿ ಹೆಚ್ಚಿಸುತ್ತದೆ, ದ್ವಿದಳ ಬೆಳೆ ಬೇರಿನಲ್ಲಿ ಗಂಟುಗಂಟಾಗಿರುವಿಕೆಯನ್ನು ಮತ್ತು ಬೀಜದ ಜೀವಾವಧಿಯನ್ನು ಹೆಚ್ಚಿಸುತ್ತದೆ, ಮಣ್ಣಿನಿಂದ ಬರುವ ರೋಗ ಹಾಗೂ ಕೀಟಗಳನ್ನು ನಿಯಂತ್ರಿಸುತ್ತದೆ.

ಬೀಜೋಪಚಾರದ ವಿಧಾನಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಯಾದ ಬೀರಪ್ಪರವರು ತಿಳಿಸಿದರು. ಮೊದಲನೆಯದಾಗಿ ರೈಜೋಬಿಯಂ ಜೈವಿಕಗೊಬ್ಬರವನ್ನು ಬೆಲ್ಲದ ಪಾಕದ ಜೊತೆ ಮಿಶ್ರಣ ಮಾಡಿ ಸ್ವಲ್ಪ ಹೊತ್ತಿನ ನಂತರ ಬೀಜಗಳನ್ನು ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಬೇಕು.ಅದೇ ರೀತಿಯಾಗಿ ಅಜೋಸ್ಪಿರಿಲ್ಲಂ ಮತ್ತು ಅಜಟೋಬ್ಯಾಕ್ಟರನ್ನು ಏಕದಳ ಧಾನ್ಯಗಳಿಗೆ ಮತ್ತು ಕಬ್ಬಿನ ಬೆಳೆಗೆ ಅನುಕ್ರಮವಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಿ ಒಂದು ಗಂಟೆಯ ನಂತರ ಬಿತ್ತನೆ ಮಾಡಬೇಕೆಂದು ಹೇಳಿದರು.

ನಂತರ ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಬೇಸಾಯ ಶಾಸ್ತ್ರ ವಿಭಾಗದ ಅಧ್ಯಾಪಕರಾದ ಡಾ. ಮೋಹನ್ ಚವ್ಹಾಣರವರು ವಿದ್ಯಾರ್ಥಿಗಳು ಹೇಳಿದ ಮಾಹಿತಿಯನ್ನು ರೈತರ ಜೊತೆ ಮತ್ತೊಮ್ಮೆ ಸಂವಾದದ ಮೂಲಕ ಬೀಜೋಪಚಾರದ ಉದ್ದೇಶ, ಜೈವಿಕ ಗೊಬ್ಬರಗಳ ಉಪಯೋಗ, ಜೈವಿಕಗೊಬ್ಬರಗಳ ವಿಧಗಳು, ಜೈವಿಕ ಗೊಬ್ಬರ ದೊರೆಯುವ ಸ್ಥಳ, ಬೀಜೋಪಚಾರ ಮಾಡುವ ಸಮಯ,ಜೈವಿಕ ಗೊಬ್ಬರ ಶೇಖರಣೆ ಮಾಡುವ ಸ್ಥಳ,ಜೈವಿಕ ಗೊಬ್ಬರ ಬಳಸುವ ಪ್ರಮಾಣ ಹಾಗೂ ಮಾಡುವ ವಿಧಾನವನ್ನು, ಪ್ರಚಲಿತದಲ್ಲಿರುವ ಸುಧಾರಿತ ತಳಿಗಳು ,ಹತ್ತಿಯಲ್ಲಿ ಬರುವ ಗುಲಾಬಿ ಕಾಯಿಕೊರಕ ರೋಗ ತಡೆಯುವಲ್ಲಿ ಬೇಕಾದ ಮುಂಜಾಗ್ರತೆ ಕ್ರಮಗಳನ್ನು ಸವಿಸ್ತಾರವಾಗಿ ರೈತರಿಗೆ ತಿಳಿಯಪಡಿಸಿದರು. ನಂತರ ತೊಗರಿ ಬೀಜೋಪಚಾರವನ್ನು ಪ್ರಾಯೋಗಿಕವಾಗಿ ಪ್ರದರ್ಶನ ಮಾಡುವುದರ ಮೂಲಕ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ್ ಜೆ.ಕೆ, ಬೀರಪ್ಪ ಅಶೋಕ್ ವಿಷಯವನ್ನು ಮತ್ತಷ್ಟು ತಿಳಿಪಡಿಸಿದರು.

ಗಂವ್ಹಾರ ಗ್ರಾಮದ ರೈತ ಮುಖಂಡರಾದ ಶಾಂತಮೂರ್ತಿ ಗೊಂಬಿಮಠ ಇವರು ಮಾತನಾಡಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಾದ ಡಾ.ಮೋಹನ್ ಚವ್ಹಾಣರವರಿಗೆ ಊರಿನ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮವನ್ನು ಮಲ್ಲಿಕಾರ್ಜುನ್‌ ಎಸ್ ಪಾಟೀಲ್ ರವರು ನಿರೂಪಿಸಿದರು. ವಿದ್ಯಾರ್ಥಿ ಮುಖಂಡರಾದ ಕಿಶೋರ್, ಅರುಣ್ ಕುಮಾರ್, ಭರತ್ ಪಾಟೀಲ್, ಕಿರಣ್ ಕುಮಾರ್, ಅಕ್ಷಯಕುಮಾರ್ ರಾಸೂರೆ, ಅಮೂಲ್, ದಾವೂದ್, ಅಯ್ಯಪ್ಪ,ಅನ್ನಪೂರ್ಣೇಶ್ವರಿ, ಮೇಘಾ, ದೀಪಿಕಾ ಹಾಗೂ ಊರಿನ ರೈತರು ಉಪಸ್ಥಿತರಿದ್ದರು.