ಬೀಜಿಂಗ್‌ನಲ್ಲಿ ಮೆಸ್ಸಿ ಮೇನಿಯಾ

ಬೀಜಿಂಗ್ (ಚೀನಾ), ಜೂ.೧೬- ಈ ಬಾರಿ ಫುಟ್ಬಾಲ್ ವಿಶ್ವಕಪ್ ಗೆದ್ದುಕೊಂಡ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಇದೀಗ ಬೀಜಿಂಗ್‌ನಲ್ಲಿ ಗುರುವಾರ ರಾತ್ರಿ ನಡೆದ ಸೌಹಾರ್ದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದು, ಸಹಜವಾಗಿಯೇ ಅಭಿಮಾನಿಗಳ ಚೀರಾಟ ಮುಗಿಲು ಮುಟ್ಟಿತ್ತು.


ಪ್ರತೀ ಬೇಸಿಗೆಯ ಬೀಜಿಂಗ್‌ನಲ್ಲಿ ಸಾಮಾನ್ಯವಾಗಿ ಆಹ್ವಾನಿತ ಸೌಹಾರ್ದ ಫುಟ್ಬಾಲ್ ಪಂದ್ಯವನ್ನು ಆಯೋಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬೀಜಿಂಗ್‌ನ ಐತಿಹಾಸಿಕ ವರ್ಕರ್ಸ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಹಾಗೂ ಆಸ್ಟ್ರೇಲಿಯಾ ನಡುವೆ ಸೌಹಾರ್ಧ ಪಂದ್ಯಕ್ಕೆ ಬರೋಬ್ಬರಿ ಸುಮಾರು ೭೦ ಸಾವಿರದಷ್ಟು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಫುಟ್ಬಾಲ್ ವಿಶ್ವಕಪ್ ಗೆದ್ದುಕೊಂಡ ಬಳಿ ಮೆಸ್ಸಿಯ ಜನಪ್ರಿಯತೆ ಹೆಚ್ಚಿದ್ದು, ಹೋದ-ಬಂದ ಕಡೆಗಳಲ್ಲಿ ಅಭಿಮಾನಿಗಳ ನೂಕುನುಗ್ಗಲು ಸಾಮಾನ್ಯವಾಗಿ ಬಿಟ್ಟಿದೆ. ಇದೇ ರೀತಿಯ ದೃಶ್ಯ ನಿನ್ನೆ ರಾತ್ರಿ ಬೀಜಿಂಗ್‌ನಲ್ಲಿ ಕೂಡ ಕಾಣಿಸಿಕೊಂಡಿತ್ತು. ಪಂದ್ಯದುದ್ದಕ್ಕೂ ಮೆಸ್ಸಿ…ಮೆಸ್ಸಿ…ಚೀರಾಟ ಮುಗಿಲು ಮುಟ್ಟಿದ್ದು, ಅಭಿಮಾನಿಗಳಿಗೆ ಅತ್ಯುತ್ತಮ ರಸದೌತಣ ನೀಡಿದ್ದು, ಮಾತ್ರ ಸುಳ್ಳಲ್ಲ. ಇನ್ನು ಪಂದ್ಯದ ಆರಂಭದಲ್ಲೇ ಅರ್ಜೆಂಟೀನಾಗೆ ಮೆಸ್ಸಿ ಮುನ್ನಡೆ ಒದಗಿಸಿದಾಗ ಸ್ಟೇಡಿಯಂನಲ್ಲಿದ್ದ ಸುಮಾರು ೬೮ ಸಾವಿರಕ್ಕೂ ಅಧಿಕ ಅಭಿಮಾನಿಗಳು ಹುಚ್ಚೆದ್ದು, ಕುಣಿದರು. ಬಳಿಕ ಪಂದ್ಯದ ಅಂತ್ಯದ ವೇಳೆಗೆ ಪೆಝ್ಝೆಲ್ಲಾ ಈ ಮುನ್ನಡೆಯನ್ನು ೨-೦ಗೆ ಏರಿಸಿದರು. ಆಸ್ಟ್ರೇಲಿಯಾ ಆಟಗಾರರು ಗೋಲಿಗಾಗಿ ತೀವ್ರ ಹೋರಾಟ ನಡೆಸಿದರೂ ಅದಕ್ಕೆ ಅರ್ಜೆಂಟೀನಾ ಬಳಗ ಅವಕಾಶ ನೀಡಲಿಲ್ಲ. ಅಂತಿಮವಾಗಿ ಸೌಹಾರ್ಧ ಪಂದ್ಯವನ್ನು ಅರ್ಜೆಂಟೀನಾ ೨-೦ ಅಂತರದಲ್ಲಿ ಗೆದ್ದುಕೊಂಡಿತು. ಇನ್ನು ಮೆಸ್ಸಿ ಆಡಳಿರುವ ಹಿನ್ನೆಲೆಯಲ್ಲಿ ಪಂದ್ಯದ ಟಿಕೆಟ್‌ಗಳನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿತ್ತು. ಬಹುಪಾಲು ಟಿಕೆಟ್‌ಗಳು ಸುಮಾರು ೪೦೦ ಡಾಲರ್‌ನಿಂದ ಹಿಡಿದು ೬೮೦ ಡಾಲರ್ ವರೆಗೂ ಹೋಗಿದ್ದು, ಮೆಸ್ಸಿ ಕ್ರೇಜ್‌ಗೆ ಕನ್ನಡಿ ಹಿಡಿದಂತಿತ್ತು.