ಬೀಜಿಂಗ್‌ನಲ್ಲಿ ದಾಖಲೆ ಉಷ್ಣಾಂಶ

ಬೀಜಿಂಗ್, ಜೂ.೨೩- ಕೆಲದಿನಗಳ ಹಿಂದೆ ಗುಜರಾತ್ ಹಾಗೂ ಉತ್ತರ ಪ್ರದೇಶದ ಹಲವೆಡೆ ಉಷ್ಣವಾತಾವರಣದಿಂದ ೪೦ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದು, ಇದೀಗ ಇದೇ ರೀತಿಯ ಸಮಸ್ಯೆ ಚೀನಾದ ಬೀಜಿಂಗ್‌ನಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೀಜಿಂಗ್ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಸೂಚಿಸಿದೆ.
ಬೀಜಿಂಗ್‌ನ ಹಲವು ಕಡೆಗಳಲ್ಲಿ ೪೦ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ಉಷ್ಣತೆಯಿಂದ ಕೂಡಿರಲಿದ್ದು, ಜನರು ಆದಷ್ಟು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ತಿಳಿಸಲಾಗಿದೆ. ಸುಮಾರು ೨೨ ಮಿಲಿಯನ್ ಜನಸಂಖ್ಯೆ ಹೊಂದಿರುವ ಬೀಜಿಂಗ್‌ನಲ್ಲಿ ಗುರುವಾರ ೪೧ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ಉಷ್ಣತೆ ದಾಖಲಾಗಿದೆ. ಈ ಮೂಲಕ ಜೂನ್‌ನಲ್ಲಿ ಅತೀ ಹೆಚ್ಚಿನ ಉಷ್ಣತೆಯ ದಾಖಲೆಯನ್ನು ನಿರ್ಮಿಸಿದೆ. ಬೀಜಿಂಗ್‌ನ ಮುಖ್ಯ ಪ್ರದೇಶ ಎಂದು ಪರಿಗಣಿಸಲಾದ ಅದರ ದಕ್ಷಿಣ ಉಪನಗರಗಳಲ್ಲಿನ ಹವಾಮಾನ ಕೇಂದ್ರವು ಮಧ್ಯಾಹ್ನ ವೇಳೆಗೆ ೪೧.೧ ಸೆಲ್ಸಿಯಸ್ ದಾಖಲಿಸಿದೆ. ೧೯೬೧ರ, ಜೂನ್ ೧೦ರಂದು ೪೦.೬ ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಿಸಿದ್ದು, ಈವರೆಗೆ ಅತೀ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಸದ್ಯದ ಪ್ರಮಾಣ ಅಳಿಸಿ ಹಾಕಿದೆ. ಮುಂದಿನ ಎಂಟರಿಂದ ಹತ್ತು ದಿನಗಳವರೆಗೆ ದೇಶದ ಉತ್ತರದ ಹೆಚ್ಚಿನ ಭಾಗಗಳಲ್ಲಿ ಹೆಚ್ಚಿನ ತಾಪಮಾನವು ಮುಂದುವರಿಯುವ ನಿರೀಕ್ಷೆಯಿದೆ ಎಂದು ಚೀನಾ ಹವಾಮಾನ ಆಡಳಿತ ಗುರುವಾರ ಹೇಳಿದೆ. ಬೀಜಿಂಗ್, ಟಿಯಾಂಜಿನ್, ಹೆಬೈ, ಶಾಂಡಾಂಗ್, ಹೆನಾನ್ ಮತ್ತು ಆಂತರಿಕ ಮಂಗೋಲಿಯಾ ಸೇರಿದಂತೆ ಸ್ಥಳಗಳಲ್ಲಿ ಹೆಚ್ಚಿನ ತಾಪಮಾನದ ಮೇಲ್ವಿಚಾರಣೆ ಮತ್ತು ಎಚ್ಚರಿಕೆಗಳು ಪುನರಾವರ್ತನೆ ಆಧಾರದ ಮೇಲೆ ಮುಂದುವರಿಯುತ್ತವೆ ಎಂದು ಅದು ಹೇಳಿದೆ. ೧೩ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಚೀನಾದ ಬಂದರು ನಗರವಾದ ಟಿಯಾಂಜಿನ್‌ನಲ್ಲಿ ಗುರುವಾರದ ತಾಪಮಾನವು ೪೧.೨ ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ.