ಬೀಜಧನ ಚೆಕ್ ವಿತರಣೆ


ಗದಗ,ಜು. 24: ಸ್ತ್ರೀಶಕ್ತಿ ಗುಂಪುಗಳು ಆರ್ಥಿಕವಾಗಿ ಸಬಲರಾಗಬೇಕು ಅದಕ್ಕಾಗಿ ಸ್ವಯಂ ಉದ್ಯೋಗ, ಗೃಹಕೈಗಾರಿಕೆ ಕೈಗೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಎಂದು ಗದಗ ಶಾಸಕ ಎಚ್.ಕೆ.ಪಾಟೀಲ ಹೇಳಿದರು.
ನಗರದ ಕೆ.ಎಚ್.ಪಾಟೀಲ ಸಭಾ ಭವನದಲ್ಲಿ ಗದಗ ಜಿ.ಪಂ, ತಾ.ಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಎರ್ಪಡಿಸಿದ್ದ ಮುಖ್ಯಮಂತ್ರಿಯವರ 75ನೇ ಸ್ವಾತಂತ್ರ್ಯ ದಿನದಂದು ಘೋಷಣೆ ಮಾಡಿರುವ ಅಮೃತ ಯೋಜನೆಯಡಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಬೀಜಧನ ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀಶಕ್ತಿ ಗುಂಪುಗಳು ಹಣವನ್ನು ವಿನಿಮಯ ಮಾಡಿಕೊಳ್ಳುವ ಕಿರುಸಾಲ ಸೌಲಭ್ಯ ಯೋಜನೆ ಕೈಗೊಂಡು ಆರ್ಥಿಕ ಸ್ವಾವಲಂಭನೆಗೆ ಮುಂದಾಗಿವೆ ಬಡ್ಡಿ ಹೆಚ್ಚು ಬರುವಂತೆ ಆಲೋಚಿಸುವ ಹಾಗೆ ಆದಾಯ ಹೆಚ್ಚಿಸುವ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಆಸಕ್ತಿ ವಹಿಸಬೇಕು ಅಂದಾಗ ಮಾತ್ರ ಆರ್ಥಿಕ ಕ್ರಾಂತಿ ಆಗಲು ಸಾಧ್ಯ ಇದು ಮಹಿಳೆಯರಿಂದ, ಸ್ತ್ರೀಶಕ್ತಿ ಗುಂಪಿನಿಂದ ಮಾತ್ರ ಸಾಧ್ಯ ಎಂದರು.
ಸ್ತ್ರೀಶಕ್ತಿ ಗುಂಪುಗಳು ಸಿದ್ಧಪಡಿಸುವ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸ ಆಗಬೇಕಿದೆ ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಚಿಂತನೆ ಮಾಡುವದು ಅವಶ್ಯವಿದೆ. ಸರಕಾರದಿಂದ, ಶಾಸಕರಿಂದ, ಮಾರುಕಟ್ಟೆಯಿಂದ ಆಗಬೇಕಾದ ಕಾರ್ಯಕ್ಕೆ ಮುಂದಾಗೋಣ ಈ ಕುರಿತು ಸ್ತ್ರೀಶಕ್ತಿ ಗುಂಪಿನ ಮುಖಂಡರು, ಅಧಿಕಾರಿಗಳನ್ನು ಒಳಗೊಂಡಂತೆ ವಿಶೇಷ ಸಭೆಯನ್ನು ಆಗಸ್ಟ 15 ರಿಂದ 30 ರೊಳಗೆ ನಡೆಸಿ ಮಾರುಕಟ್ಟೆಯಲ್ಲಿ ನೈಪುಣ್ಯತೆಯುಳ್ಳವರ ಪರಿಣಿತರೊಂದಿಗೆ ಚರ್ಚೆ ನಡೆಸಿ ಹೊಸ ವ್ಯವಸ್ಥೆ ರೂಪುಗೊಳ್ಳುವಂತೆ ಮಾಡೋಣ ಎಂದರು.
ಭಾರತ ಸ್ವತಂತ್ರಗೊಂಡು 75 ವರ್ಷಗಳಾಗಲಿವೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷವನ್ನು ಸಂಭ್ರಮದಿಂದ ಆಚರಿಸೋಣ. ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಗದಗ ಜಿಲ್ಲೆಯ 5 ಸಾವಿರ ಸ್ತ್ರೀಶಕ್ತಿ ಗುಂಪುಗಳು ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಮೆರಗುಗೊಳಿಸಿ ಎಂದರು.
ಸಮಾರಂಭದಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ 21 ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ತಲಾ 1 ಲಕ್ಷ ರೂ.ಗಳಂತೆ ಒಟ್ಟು 21 ಲಕ್ಷ ರೂ.ಗಳ ಬೀಜಧನದ ಚೆಕ್‍ಗಳನ್ನು ಶಾಸಕರು ವಿತರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕ ಪರಶುರಾಮ ಶೆಟ್ಟೆಪ್ಪನವರ, ಗದಗ ತಹಶೀಲ್ದಾರ ಕಿಶನ್ ಕಲಾಲ, ವಿದ್ಯಾಧರ ದೊಡ್ಡಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಿರಿಜಾ ದೊಡ್ಡಮನಿ ಸ್ವಾಗತಿಸಿದರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುಲಗೆಮ್ಮ ಜೋಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಲೆಕ್ಕ ಸಹಾಯಕ ರಾಜು ಕಂಟಿಗೊಣ್ಣವರ ಹಾಗೂ ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು.
ಸಮಾರಂಭದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು. ಇದೇ ಸಂದರ್ಭದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳವರು ಸಿದ್ದಪಡಿಸಿದ ವಿವಿದ ಖಾದ್ಯಗಳನ್ನು, ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಕಿಶನ್ ಕಲಾಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಸ್ತ್ರೀಶಕ್ತಿ ಗುಂಪುಗಳ ಪದಾಧಿಕಾರಿಗಳು, ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.