ಬೀಜಗೊಬ್ಬರದ ಕೊರತೆಯಾಗದಂತೆ ನಿಗಾ ವಹಿಸಿ

ಗದಗ ಜೂ.5: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು ಚುರುಕುಗೊಳ್ಳಬೇಕು. ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಯಲ್ಲಿ ವ್ಯತ್ಯಯವಾಗಬಾರದು. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳ ಕೊರೆತಯಾದಂತೆ ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮು ಕೃಷಿ ಚಟುವಟಿಕೆ ಕುರಿತು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿತ್ತನೆ ಬೀಜ ವಿತರಿಸಲು ಹಾಗೂ ಬಿತ್ತನೆ ಬೀಜದ ಕೊರತೆಯಾಗದಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ಸಮರ್ಪಕ ದಾಸ್ತಾನು ನಿರ್ವಹಿಸಲು ಮತ್ತು ಸರ್ಕಾರದ ಮಾರ್ಗಸೂಚಿಯನ್ವಯ ಬೆ 6 ರಿಂದ 12 ಗಂಟೆಯವರೆಗೆ ರೈತ ಸಂಪರ್ಕ ಕೇಂದ್ರ, ಆಯ್ದ ವಿತರಣಾ ಕೇಂದ್ರ ಹಾಗೂ ಖಾಸಗಿ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ ವಿತರಣೆ ಮಾಡಬೇಕು. ಸರ್ಕಾರವು ರಸಗೊಬ್ಬರವನ್ನು ಜಿಲ್ಲಾವಾರು ಹಂಚಿಕೆ ಮಾಡಲಾಗಿರುತ್ತದೆ. ಒಂದು ವೇಳೆ ಅಭಾವವಿರುವ ( ಕಡಿಮೆ ಪ್ರಮಾಣದಲ್ಲಿರುವ ) ರಸಗೊಬ್ಬರವನ್ನು ಜಿಲ್ಲೆಯ ರೈತರಿಗೆ ಆದ್ಯತೆಯ ಮೇರೆಗೆ ವಿತರಣೆ ಮಾಡಬೇಕು. ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ವಿತರಣೆಯಾಗದಂತೆ ಕ್ರಮವಹಿಸಬೇಕು. ಈ ಕುರಿತು ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ಕಾಲ ಕಾಲಕ್ಕೆ ತಪಾಸಣೆ ನಡೆಸಿ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಮಾರಾಟ ಮಾಡುವವರ ಹಾಗೂ ಕಳಪೆ ಬಿತ್ತನೆ ಬೀಜ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಅಂತಹವರ ಲೈಸನ್ಸ ನ್ನು ರದ್ದು ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಲಕ್ಷ್ಮೇಶ್ವರ , ಗಜೇಂದ್ರಗಡ ಹಾಗೂ ಇತರೆ ಭಾಗಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ನೂಕು ನುಗ್ಗಲು ಆಗುತ್ತಿರುವುದು ಗಮನಕ್ಕೆ ಬಂದಿದ್ದು ಸ್ಥಳೀಯ ಅಧಿಕಾರಿಗಳು ಪೆÇಲೀಸರ ನೆರವಿನೊಂದಿಗೆ ಕೋವಿಡ್ -19 ಮಾರ್ಗಸೂಚಿಗಳ ಉಲ್ಲಂಘನೆಯಾಗದಂತೆ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ , ರಸಗೊಬ್ಬರ ಹಾಗೂ ಕೀಟನಾಶಕಗಳ ವಿತರಣೆಯಾಗುವಂತೆ ಸೂಕ್ತ ಕ್ರಮ ವಹಿಸಬೇಕೆಂದು ಸೂಚಿಸಿದರು.
ಪಕ್ಕದ ಜಿಲ್ಲೆಗಳ ರೈತರು ಜಿಲ್ಲೆಯ ರೈತ ಸಂಫರ್ಕ ಕೇಂದ್ರ ಹಾಗೂ ಕೃಷಿ ಪರಿಕರ ವಿತರಣಾ ಕೇಂದ್ರದಲ್ಲಿ ವ್ಯವಹರಿಸುವುದರಿಂದ ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಗೊಬ್ಬರ ಕ್ರಿಮಿನಾಶಕಗಳ ಕೊರತೆಯಾಗುವ ಸಂಭವವಿದ್ದು ಬೇರೆ ಜಿಲ್ಲೆಯ ರೈತರಿಗೆ ಅವಕಾಶ ನೀಡದಿರುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.