ಬೀಚ್ ಕ್ಲೀನಿಂಗ್ ಯಂತ್ರದ ಟ್ರ್ಯಾಕ್ಟರ್ ಬೆಂಕಿಗಾಹುತಿ


ಮಲ್ಪೆ, ಎ.೨- ಮಲ್ಪೆ ಬೀಚ್‌ನಲ್ಲಿ ನಿಲ್ಲಿಸಿದ್ದ ಬೀಚ್ ಕ್ಲೀನಿಂಗ್ ಯಂತ್ರಕ್ಕೆ ಬಳಸುವ ಟ್ರ್ಯಾಕ್ಟರ್ ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಿನ್ನೆ ಬೆಳಗಿನ ಜಾವ ೪ ಗಂಟೆ ಸುಮಾರಿಗೆ ನಡೆದಿದೆ.
ಬೀಚ್‌ನಲ್ಲಿರುವ ಕಸಗಳನ್ನು ಶುಚಿಗೊಳಿಸುವ ಯಂತ್ರವನ್ನು ಎಳೆದೊಯ್ಯುವ ಟ್ರ್ಯಾಕ್ಟರನ್ನು ಯಂತ್ರದ ಜೊತೆಗೆ ಬೀಚ್‌ನಲ್ಲಿ ನಿಲ್ಲಿಸಲಾಗಿತ್ತು. ಬೆಳಗಿನ ಜಾವ ಟ್ರ್ಯಾಕ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಟ್ರ್ಯಾಕ್ಟರ್ ಬೆಂಕಿಯಿಂದ ಸುಟ್ಟು ಹೋಗಿದೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಲ್ಪೆ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರ ಒಂದು ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಟ್ರ್ಯಾಕ್ಟರ್ ಜೊತೆ ಇದ್ದ ಕ್ಲೀನಿಂಗ್ ಯಂತ್ರಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಈ ಅವಘಡ ಆಕಸ್ಮಿಕವೋ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಬಗ್ಗೆ ಬೀಚ್ ಅಭಿವೃದ್ಧಿ ಸಮಿತಿಯವರು ಮಲ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬೆಂಕಿ ಅವಘಡದಿಂದ ಸುಮಾರು ೫ ಲಕ್ಷ ರೂ. ನಷ್ಟ ಉಂಟಾಗಿರಬಹುದೆಂದು ಅಂದಾಜಿಸ ಲಾಗಿದೆ.