ಬೀಚ್‌ನಲ್ಲಿ ಇಬ್ಬರು ನೀರುಪಾಲು

ಓರ್ವನ ಮೃತದೇಹ ಪತ್ತೆ | ಹಲವರ ರಕ್ಷಣೆ
ಸುರತ್ಕಲ್, ಜ.೧೧- ಸಸಿಹಿತ್ಲುವಿನ ಮುಂಡ ಬೀಚ್‌ನಲ್ಲಿ ಸ್ನಾನಕ್ಕಿಳಿದ ೯ ಮಂದಿಯ ಪೈಕಿ ಒಬ್ಬರು ಮೃತಪಟ್ಟು ಇನ್ನೊಬ್ಬರು ನಾಪತ್ತೆಯಾಗಿ ಏಳು ಮಂದಿಯನ್ನು ಸ್ಥಳೀಯರು ರಕ್ಷಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಸಾಣೂರು ಮೂಲದ ಸುಂದರ್ (೪೫) ಎಂದು ಗುರುತಿಸಲಾಗಿದ್ದು, ತೋಕೋರು ಮೂಲದ ದಾಮೋದರ್ (೫೫) ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರೆದಿದೆ. ಸೀಮಂತ ಕಾರ್ಯಕ್ರಮಕ್ಕೆಂದು ಬಂದ ನಾಲ್ಕು ಪುರುಷರು ಮತ್ತು ನಾಲ್ಕು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಜನರು ತೋಕೂರಿಗೆ ಬಂದಿತ್ತು ಅಲ್ಲಿಂದ ಸಂಜೆ ವೇಳೆಗೆ ಬೀಚ್‌ಗೆ ಬಂದಿದ್ದರು. ಈ ವೇಳೆ ಮಹಿಳೆಯೋರ್ವರು ನೀರಿನಲ್ಲಿ ಉಳುಗಿದ ಸಂದರ್ಭ ಸುಂದರ್ ಮತ್ತು ದಾಮೋದರ್ ರಕ್ಷಣೆಗಾಗಿ ಸಮುದ್ರಕ್ಕೆ ಧುಮುಕಿದ್ದರು. ಅದೇ ಪಕ್ಕದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರು ತಕ್ಷಣ ನೆರವಿಗೆ ಬಂದು ಮಹಿಳೆಯನ್ನು ರಕ್ಷಿಸಿದ್ದು, ಬೃಹತ್ ಅಲೆಗೆ ಸಿಲುಕಿದ ಸುಂದರ್ ಮತ್ತು ದಾಮೋದರ್ ಸಮುದ್ರದಲ್ಲಿ ಮುಳುಗಿದ್ದರು. ಈ ಸಂದರ್ಭ ಹೆಜಮಾಡಿಯ ಕರಾವಳಿ ಕಾವಲು ಪೊಲೀಸ್ ಪಡೆ ಮತ್ತು ಮಂತ್ರ ಸರ್ಫ್ ಕ್ಲಬ್ ಸದಸ್ಯರು ಆಗಮಿಸಿ ಸಮುದ್ರ ಪಾಲಾದವರ ಪತ್ತೆಗೆ ಶ್ರಮಿಸಿದರು. ಆದರೆ, ಸುಂದರ್ ಅವರ ಜೀವ ಉಳಿಸಲಾಗಲಿಲ್ಲ. ದಾಮೋದರ್ ಪತ್ತೆಗಾಗಿ ಹುಡುಕಾಟ ನಡೆಯುತ್ತಿದ್ದು, ರಕ್ಷಿಸಿದ ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮಂತ್ರ ಸರ್ಫ್ ಕ್ಲಬ್ ತಂಡದ ಸದಸ್ಯರಾದ ಗಿರಿ ಬಪ್ಪನಾಡು, ಕಿರಣ್, ಅರ್ಜುನ್, ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯ ಚಂದ್ರಕುಮಾರ್ ಎಂಬವರು ದೋಣಿಯಲ್ಲಿ ಧಾವಿಸಿ ಬಂದು ಆರು ಮಂದಿಯನ್ನು ರಕ್ಷಿಸಿದ್ದು, ಸಮುದ್ರದ ಅಳಿವೆಬದಿಯಲ್ಲಿ ಸುಂದರ(೪೫) ಎಂಬವರ ಶವ ಪತ್ತೆಯಾಗಿದೆ. ನೀರುಪಾಲಾದ ಇನ್ನೊಬ್ಬ ದಾಮೋದರ್(೫೫) ಎಂಬವರ ಪತ್ತೆಗಾಗಿ ಸ್ಥಳೀಯ ಈಜುಗಾರರು ಶ್ರಮಿಸುತ್ತಿದ್ದಾರೆ. ಈ ಕುರಿತು ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.