ಬಿ.ಹರ್ಷವರ್ಧನ್ 30 ಸಾವಿರ ಮತಗಳ ಅತ್ಯಧಿಕ ಅಂತರದಿಂದ ಗೆಲ್ಲುವುದು ನಿಶ್ಚಿತ

ನಂಜನಗೂಡು: ಮಾ.03:- ಈ ಬಾರಿ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಹಾಲಿ ಶಾಸಕ ಬಿ.ಹರ್ಷವರ್ಧನ್ 25 ರಿಂದ 30 ಸಾವಿರ ಮತಗಳ ಅತ್ಯಧಿಕ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಹರ್ಷವರ್ಧನ್ 12 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅವರಿಗೆ ಸಿಗುತ್ತಿರುವ ಅಭೂತಪೂರ್ವ ಜನಬೆಂಬಲವನ್ನು ನೋಡಿದರೆ 25 ರಿಂದ 30 ಸಾವಿರ ಅಂತರದಲ್ಲಿ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ ಎಂದರು.
ಇನ್ನು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆರಳೆಣಿಕೆಯಷ್ಟು ಕ್ಷೇತ್ರದಲ್ಲಿ ಮಾತ್ರ ಗೆಲುವು ಕಾಣಲು ಸಾಧ್ಯವಿತ್ತು ಎಂಬ ಮಾತನ್ನು ಜನರು ಈ ಬಾರಿ ಸುಳ್ಳು ಮಾಡಲಿದ್ದಾರೆ. ಸಂಕಲ್ಪ ಯಾತ್ರೆಗೆ ಸಿಗುತ್ತಿರುವ ಜನಸ್ಪಂದನೆ ನೋಡಿದರೆ ಹಳೇ ಮೈಸೂರು ಭಾಗದಲ್ಲಿ ಅತ್ಯಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಕಳೆದ ಬಾರಿ 3 ಸಾವಿರ ಅಂತರದಲ್ಲಿ ಬಿಜೆಪಿ ಸೋಲು ಕಂಡಿದ್ದ ಹನೂರು ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ. ಉಳಿದಂತೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಹಾಗಾಗಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ತನ್ನ ಅಲೆ ಸೃಷ್ಟಿಸಲಿದೆ ಎಂದು ಹೇಳಿದರು.
ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿ, 13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಹೋದ ಕಡೆ ಜನರು ಸೇರುತ್ತಿಲ್ಲ. ಹೀಗಾಗಿ 500 ರೂ. ಹಣ ಕೊಟ್ಟು ಜನ ಸೇರಿಸುವಂತೆ ಪಕ್ಷದವರಿಗೆ ಕರೆ ನೀಡಿದ್ದಾರೆ. ಹಣ ಕೊಟ್ಟರೂ ಜನರ ಬರಲ್ಲ. ಏಕೆಂದರೆ ಜನರೇ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಜನ ಮೆಚ್ಚಿದ್ದಾರೆ. ಅವರ ಮೇಲೆ ಜನರಿಗೆ ವಿಶ್ವಾಸ ಇಮ್ಮಡಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಜನತೆಗೆ ಋಣಿ: ಹರ್ಷವರ್ಧನ್
ಬಿ.ಎಸ್.ಯಡಿಯೂರಪ್ಪ ಅವರ ಸಹಕಾರದಿಂದ ನುಗು ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ಬಾರಿ ನಂಜನಗೂಡಿಗೆ ಆಗಮಿಸಿ ಹಲವು ಮಹತ್ತರ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಾರೆ. ನನ್ನ ಮೇಲೆ ವಿಶ್ವಾಸವಿಟ್ಟು ಮೊದಲ ಬಾರಿಗೆ ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲು ನೆರವಾದ ಕ್ಷೇತ್ರದ ಜನತೆಗೆ ನಾನು ಋಣಿಯಾಗಿದ್ದು 700 ಕೋಟಿ ಅನುದಾನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದೇನೆ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.
13 ಸಮುದಾಯಗಳಿಗೆ ಪ್ರತ್ಯೇಕವಾಗಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಕೊಡಲು 8 ಕೋಟಿ ಅನುದಾನ ಬಿಡುಗಡೆಗೆ ಎದುರಾಗಿದ್ದ ಕಾನೂನಾತ್ಮ ತೊಡಕನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ನಿವಾರಿಸಿದ್ದೇನೆ. ಮುಂದಿನ ಎರಡು ವಾರದಲ್ಲಿ 13 ಸಮುದಾಯ ಭವನಗಳ ನಿರ್ಮಾಣಕ್ಕೆ ಮುಂದಾಗುವ ಮೂಲಕ ಸರ್ವಜನಾಂಗದ ಶಾಂತಿಯ ತೋಟ ಪರಿಕಲ್ಪನೆಯಡಿ ಎಲ್ಲಾ ಸಮುದಾಯಗಳಿಗೆ ಭವನ ನಿರ್ಮಾಣ ಮಾಡಲಾಗುವುದು ಎಂದರು.
ಇನ್ನು ಸಂಕಲ್ಪ ಯಾತ್ರೆಗೆ ನಿರೀಕ್ಷೆಗೂ ಮೀರಿ 12 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದು, ಯಾತ್ರೆ ಯಶಸ್ವಿಗೊಳಿಸಲು ತಳಮಟ್ಟದ ಹಿಡಿದು ಎಲ್ಲಾ ಹಂತದ ಕಾರ್ಯಕರ್ತರಿಗೂ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.
ಭವ್ಯ ಮೆರವಣಿಗೆ
ಗುಂಡ್ಲುಪೇಟೆ ಮಾರ್ಗವಾಗಿ ನಂಜನಗೂಡಿಗೆ ಆಗಮಿಸಿದ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ನಿರ್ಮಲ್‍ಕುಮಾರ್ ಸುರಾನಾ ಸೇರಿದಂತೆ ಅನೇಕ ಗಣ್ಯರನ್ನು ನಗರದ ದೇವೀರಮ್ಮನಹಳ್ಳಿ ಬಸವ ವೃತ್ತದ ಬಳಿ ಶಾಸಕ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ನಂತರ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಪ್ರಸನ್ನ ಚಿಂತಾಮಣಿ ಗಣಪತಿ ದೇವಾಲಯ ಬಳಿಗೆ ತೆರೆದ ವಾಹನದಲ್ಲಿ ಗಣ್ಯರನ್ನು ಕರೆತರಲಾಯಿತು. ಅಲ್ಲಿಂದ ಆರಂಭಗೊಂಡ ಸಂಕಲ್ಪ ಯಾತ್ರೆಯ ಭವ್ಯ ಮೆರವಣಿಗೆ ಆರಂಭಗೊಂಡಿತು. ನೂರಾರು ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು ತೆರೆದ ವಾಹನದ ಮುಂದೆ ಹೆಜ್ಜೆ ಹಾಕಿದರು.
ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಕಂಸಾಳೆ ನೃತ್ಯ, ನಾಸಿಕ್ ಡೋಲು ವಾದನ ಕಲಾವಿದರ ಪ್ರದರ್ಶನ ಮೆರವಣಿಗೆಯ ಕಳೆ ಹೆಚ್ಚಿಸಿತು. ವಿವಿಧ ದೇವರ ರೂಪಗಳಲ್ಲಿದ್ದ ತುಮಕರು ಗೊಂಬೆ ಬಳಗ ಹಾಗೂ ಸ್ಯಾಕ್ಸೋಫೋನ್ ವಾದನ ಮೆರವಣಿಗೆಯ ಅಂದ ಹೆಚ್ಚಿಸಿತು. ಮಹಿಳೆಯರ ಮಹಿಳೆಯರು ಸೇರಿದಂತೆ ಕಾರ್ಯಕರ್ತರು ಕುಣಿದು ಕುಪ್ಪಳಿಸುವ ಮೂಲಕ ಮೆರಗು ನೀಡಿದರು. ಗಣ್ಯರಿಗೆ ಆಯಕಟ್ಟಿನ ಸ್ಥಳದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕರ್ತರು ಜಯಘೋಷ ಕೂಗುತ್ತಾ ಸಾಗಿದರು. ಮೆರವಣಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು. ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು.
ರಾಷ್ಟ್ರಪತಿ ರಸ್ತೆಯಲ್ಲಿ ಸಾಗಿದ ಮೆರವಣಿಗೆಯು ಶ್ರೀಕಂಠೇಶ್ವರಸ್ವಾಮಿ ದೇಗುಲದ ಬಳಿ ಸಾಗುತ್ತಿದ್ದಂತೆ ಗಣ್ಯರು ದೇವರ ದರ್ಶನ ಪಡೆದರು. ನಂತರ ಅಂಗಡಿ ಬೀದಿ, ಬಜಾರ್ ರಸ್ತೆ ಮೂಲಕ ಸಾಗಿ ಅಂಬೇಡ್ಕರ್ ಪ್ರತಿಮೆ ಮುಂಭಾಗ ಅಂತ್ಯಗೊಂಡಿತು.
ಶಾಸಕರಾದ ಎನ್.ಮಹೇಶ್, ನಿರಂಜನಕುಮಾರ್, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ನಗರಸಭಾಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಹೊರಳವಾಡಿ ಪಿ.ಮಹೇಶ್, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂಜಯ್ ಶರ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.