ಬಿ.ಶ್ರೀರಾಮುಲು ಪರ ಆನಂದ್ ಸಿಂಗ್ ಪ್ರಚಾರ : ‘ದೇಶ, ಮಕ್ಕಳ ಭವಿಷ್ಯ ನೋಡಿ ಮತ ಚಲಾಯಿಸಿ’


ಸಂಜೆವಾಣಿ ವಾರ್ತೆ
ಹೊಸಪೇಟೆ:ಮಾ,31- ಈ ದೇಶದ ಮತ್ತು ನಮ್ಮ ಮಕ್ಕಳ ಭವಿಷ್ಯ ಭದ್ರವಾಗಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮಾತ್ರ. ಅವರ ಕೈ ಬಲಪಡಿಸಬೇಕಿದ್ದರೆ ಬಳ್ಳಾರಿ–ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಮಾಜಿ ಸಚಿವ ಆನಂದ್ ಸಿಂಗ್ ಮನವಿ ಮಾಡಿದರು.
ಇಲ್ಲಿಗೆ ಸಮೀಪದ ಹೊಸೂರಿನಲ್ಲಿ ಶನಿವಾರ ಹೊಸೂರಮ್ಮ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಪ್ರಚಾರ ಆರಂಭಿಸಿದ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು, ‘ಯುವರಾಜ’ನ ಕೈಯಲ್ಲಿ ದೇಶ ಭದ್ರವಾಗಿರಲು ಸಾಧ್ಯವೇ ಇಲ್ಲ, ಹೀಗಾಗಿ ಮೋದಿ ಕೈ ಬಲಪಡಿಸಬೇಕಿದ್ದರೆ ನಿಮ್ಮ ಒಂದೊಂದು ಮತವೂ ಮುಖ್ಯವಾಗುತ್ತದೆ, ಅದನ್ನು ಕಮಲದ ಗುರುತಿಗೇ ಹೇಕಬೇಕಾಗುತ್ತದೆ ಎಂದರು.
’ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತುಕಾರಾಂ ಅವರು ಒಲ್ಲದ ಮನಸ್ಸಿನಿಂದಲೇ ನ್ಪರ್ದೆಗೆ ಒಪ್ಪಿಕೊಂಡಿದ್ದಾರೆ. ಅವರು ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. ಗೆದ್ದರೆ ತಮ್ಮ ಪುತ್ರಿಗೆ ಶಾಸಕ ಟಿಕೆಟ್, ಸೋತರೆ ಮಂತ್ರಿ ಪದವಿ ನೀಡಬೇಕೆಂಬ ಷರತ್ತು ಹಾಕಿ ಸ್ಪರ್ಧೆಗೆ ಇಳಿದಿದ್ದಾರೆ. ಹೀಗೆ ಒಪ್ಪಂದ ಮಾಡಿಕೊಂಡು ಬಂದವರಿಗೆ ನೀವು ಮತ ಹಾಕುತ್ತೀರಾ? ಇವರು ನಿಮಗಾಗಿ ಕೇಂದ್ರದಲ್ಲಿ ಏನು ಕೆಲಸ ಮಾಡಬಲ್ಲರು, ಮೇಲಾಗಿ ತುಕಾರಾಂ ಎಂದರೆ ಯಾರಿಗೆ ಗೊತ್ತಿದೆ? ಶ್ರೀರಾಮುಲು ಅವರಾದರೆ ಇಡೀ ದೇಶಕ್ಕೇ ಗೊತ್ತಿದೆ. ಶ್ರೀರಾಮುಲು ಗೆದ್ದರೆ ಮಂತ್ರಿಯೂ ಆಗುವ ಸಾಧ್ಯತೆ ಇದೆ’ ಎಂದು ಆನಂದ್ ಸಿಂಗ್ ಹೇಳಿದರು.
‘ಪ್ರಧಾನಿ ಮೋದಿ ಅವರು ಇರುವ ಕಾರಣಕ್ಕೇ ದೇಶ ಸುರಕ್ಷಿತವಾಗಿದೆ. ಭಯೋತ್ಪಾದನೆಯ ಹುಟ್ಟಡಗಿದೆ. ಅವರನ್ನು ಸೋಲಿಸಲು ವಿರೋಧ ಪಕ್ಷಗಳ ಜತೆಗೆ ಸೇರಿಕೊಂಡು ನೆರೆಹೊರೆಯ ದೇಶಗಳು ಪಿತೂರಿ ಮಾಡುತ್ತಿರುವುದೂ ಸುಳ್ಳಲ್ಲ. 2047ರ ಹೊತ್ತಿಗೆ ದೇಶ ವಿಶ್ವಗುರುವಾಗುವ ನಿಟ್ಟಿನಲ್ಲಿ ಈಗಾಗಲೇ ಅಡಿಪಾಯ ಹಾಕಲಾಗಿದೆ. ಆ ಕನಸು ಈಡೇರಲು ಮೋದಿ ಅವರ ಕೈ ಬಲಪಡಿಸಬೇಕಾದ ಅಗತ್ಯವಿದೆ’ ಎಂದು ಮನವಿ ಮಾಡಿದರು.
ನಾನು ಸೋತರೆ ಮನೆಗೆ: ‘ನಾನು ಎಂಟು ಬಾರಿ ಚುನಾವಣೆ ಎದುರಿಸಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಈ ಬಾರಿ ಮತ್ತೆ ನನ್ನನ್ನು ಸೋಲಿಸಿದರೆ ನಾನು ಮನೆಗೇ ಹೋಗಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ನಿಕಟ ಸಂಬಂಧ ಹೊಂದಿರುವ ನನ್ನನ್ನು ಗೆಲ್ಲಿಸಿದರೆ ಕ್ಷೇತ್ರದ ಹಲವು ಸಮಸ್ಯೆಗಳಿಗ ಧ್ವನಿಯಾಗಿ, ಪರಿಹಾರ ಕೆಲಸ ಮಾಡುವುದು ನಿಶ್ಚಿತ’ ಎಂದು ಬಿ.ಶ್ರೀರಾಮುಲು ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ಸಮತೋಲಿತ ಜಲಾಶಯ ನಿರ್ಮಾಣದ ಪ್ರಯತ್ನ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿತ್ತು. ಅದಕ್ಕೆ ಮತ್ತೆ ಜೀವ ತುಂಬಬೇಕಿದೆ. ವಿಜಯನಗರ ಕಾಲುವೆಗಳ ಅಂಚಿನವರೆಗೂ ನೀರು ಹರಿಯಬೇಕಿದೆ. ಈ ಭಾಗದ ಇನ್ನಷ್ಟು ಸಮಸ್ಯೆಗಳ ಬಗೆಗೆ ನನಗೆ ಸಂಪೂರ್ಣ ಜ್ಞಾನ ಇದ್ದು, ಆನಂದ್ ಸಿಂಗ್ ಅವರ ಜತೆಗೂಡಿ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ನಿಶ್ಚಿತ ಎಂದು ಅವರು ಹೇಳಿದರು.
ಯುವ ಮುಖಂಡ ಸಿದ್ಧಾರ್ಥ ಸಿಂಗ್ ಮಾತನಾಡಿದರು. ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾ, ಹೊಸಪೇಟೆ ಮಂಡಲ ಅಧ್ಯಕ್ಷ ಶಂಕರ್ ಮೇಟಿ ಇತರರು ಇದ್ದರು. ಮನೆ ಮನೆ ಪ್ರಚಾರ: ಹೊಸೂರು ಭಾಗದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಶ್ರೀರಾಮುಲು, ಆನಂದ್‌ ಸಿಂಗ್, ಸಿದ್ಧಾರ್ಥ ಸಿಂಗ್ ಹಾಗೂ ಇತರರು ಮತ ಯಾಚಿಸಿದರು.  ಬಳಿಕ ನಾಯಕರು ತೆರೆದ ವಾಹನದಲ್ಲಿ ನಾಗೇನಹಳ್ಳಿ, ಹಂಪಿ, ಕಮಲಾಪುರ ಕಡೆಗೆ ತೆರಳಿದರು