
ಸಂಜೆವಾಣಿ ವಾರ್ತೆ
ಕೆಂಭಾವಿ:ನ.13:ಯುವ ಮುಖಂಡ, ಯಶಸ್ವಿ ರಾಜಕಾರಣಿ ಬಿ.ವೈ.ವಿಜಯೇಂದ್ರ ಅವರಿಗೆ ಸರಿಯಾದ ಸಮಯದಲ್ಲಿ ಬಿಜೆಪಿ ಪಕ್ಷದ ಸಾರಥ್ಯ ಒಲಿದಿರುವದರಿಂದ ಪಕ್ಷದ ಯುವಕರು ಹಾಗೂ ಹಿರಿಯರಲ್ಲಿ ಆತ್ಮ ವಿಶ್ವಾಸ ಹೆಚ್ಚಲಿದೆ ಎಂದು ಯುವ ಮುಖಂಡ ಅಮೀನರೆಡ್ಡಿ ಯಾಳಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯೇಂದ್ರ ಅಣ್ಣನವರಿಗೆ ರಾಜ್ಯ ಬಿಜೆಪಿ ಸಾರಥ್ಯ ವಹಿಸುವ ಮೂಲಕ ವರಿಷ್ಠರು ಹೊಸ ತಲೆಮಾರಿನ ನಾಯಕತ್ವ ಬೆಳೆಸಲು ಗಟ್ಟಿ ನಿರ್ಧಾರ ಮಾಡಿದ್ದಾರೆ. ವಿಜಯೇಂದ್ರ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವದು ಕಲ್ಯಾಣ ಕರ್ನಾಟಕ ಭಾಗದ ಮುಖಂಡರಲ್ಲಿ ಹರ್ಷ ತಂದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ವಿಜಯೇಂದ್ರ ಅವರು ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ. ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದೆ.
ವಿಜಯೇಂದ್ರ ಅವರು ಸಂಘಟನಾ ಚತುರರಾಗಿದ್ದು ಎಲ್ಲ ಜಾತಿ, ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗುವ ತಾಕತ್ತಿದೆ. ಎಂತಹ ಸಂದರ್ಭದಲ್ಲೂ ವಿರೋಧಿ ಪಕ್ಷಗಳನ್ನು ಬಗ್ಗು ಬಡಿಯುವ ಶಕ್ತಿ ಹೊಂದಿದ್ದಾರೆ. ತಂದೆಯ ಅನುಭವ, ಸಂಘದ ಮಾರ್ಗದರ್ಶನ ಅವರನ್ನು ಇನ್ನೂ ಎತ್ತರದ ಸ್ಥಾನಕ್ಕೆ ಕೊಂಡಯ್ಯಲಿದೆ ಎಂದು ತಿಳಿಸಿದರು.