ಬಿ.ವೈ.ವಿಜಯೇಂದ್ರ ಬಚ್ಚಾ : ಕೆ.ಎಸ್.ಈಶ್ವರಪ್ಪ ಟೀಕಾಪ್ರಹಾರ!

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಏ. ೧೭: ‘ಪುಗ್ಸಟ್ಟೆ ಮಾತುಗಳಿಗೆ, ಬಿ.ವೈ.ವಿಜಯೇಂದ್ರಗೆ ತಾವು ಕೂಡ ಬೆಲೆ ಕೊಡುವುದಿಲ್ಲ. ರಾಜ್ಯಾಧ್ಯಕ್ಷನಾಗಲು ಇರುವ ಯೋಗ್ಯತೆಯಾದರೂ ಏನು. 40 ವರ್ಷಗಳ ಕಾಲ ಪಕ್ಷಕ್ಕೆ ಶ್ರಮ ಹಾಕಿದ್ದೆನೆ. ನಿಮ್ಮಪ್ಪ (ಯಡಿಯೂರಪ್ಪ) ಹಾಕಿದ ಶ್ರಮದಿಂದ ರಾಜ್ಯಾಧ್ಯಕ್ಷನಾಗಿದ್ದಿಯಾ. ನಿನಗೆ ಮಾತನಾಡಲು ಯೋಗ್ಯತೆಯೇ ಇಲ್ಲ’ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ಏಕವಚನದಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿ.ವೈ.ವಿಜಯೇಂದ್ರ ಅವರು ಮಾಡಿರುವ ಆರೋಪಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಕೆ.ಎಸ್.ಈಶ್ವರಪ್ಪ ಆಕ್ರೋಶಭರಿತ ಪ್ರತಿಕ್ರಿಯೆ ನೀಡಿದರು. ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ‘ಶಿವಮೊಗ್ಗ ನಗರಕ್ಕೆ, ಜಿಲ್ಲೆಗೆ ತಾವು ಏನು ಮಾಡಿದ್ದೆನೆ ಎಂಬುವುದು ಜಿಲ್ಲೆಯ ಜನರಿಗೆ ಗೊತ್ತಿದೆ’ ಎಂದು ತಿರುಗೇಟು ನೀಡಿದ್ದಾರೆ. ಶಿಕಾರಿಪುರ ವಿಧಾನಸಭೆ ಚುನಾವಣೆಯಲ್ಲಿ 60 ಸಾವಿರ ಮತಗಳ ಲೀಡ್ ನಿಂದ 10 ಸಾವಿರಕ್ಕೆ ಇಳಿದಿದೆ. ಮುಂದಿನ ಚುನಾವಣೆಯಲ್ಲಿ ಎಷ್ಟು ಲೀಡ್ ಸಿಗಲಿದೆ ಎಂಬುವುದು ಗೊತ್ತಾಗಲಿದೆ. ಎಷ್ಟು ಕೋಟಿ ಮಾಡಿದ್ದಿಯಾ ಗೊತ್ತಿಲ್ಲ. ಹಗುರವಾಗಿ ಮಾತನಾಡಿದರೆ ಬೇರೆ ಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಇನ್ನೂ ನೀನು ಬಚ್ಚಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮಪ್ಪನ ಶ್ರಮದಿಂದ ರಾಜ್ಯಾಧ್ಯಕ್ಷನಾಗಿದ್ದಿಯಾ. ಇದನ್ನು ನೆನಪಿಟ್ಟುಕೊಂಡು ಮಾತಾಡು. 40 ವರ್ಷಗಳ ಕಾಲ ಪಕ್ಷಕ್ಕಾಗಿ ಶ್ರಮ ಹಾಕಿದ್ದೆನೆ. ತಮ್ಮ ವಿರುದ್ದ ಟೀಕೆ ಮಾಡುವಷ್ಟು ಯೋಗ್ಯತೆ ಇಲ್ಲ. 6 ತಿಂಗಳ ಕಾಲ ಒತ್ತಡ ಹಾಕಿ ರಾಜ್ಯಾಧ್ಯಕ್ಷನಾಗಿದ್ದಿಯಾ. ಮಾತನಾಡುವಾಗ ಹುಷಾರ್ ಎಂದು ಬಿ.ವೈ.ವಿಜಯೇಂದ್ರ ವಿರುದ್ದ ಹರಿಹಾಯ್ದಿದ್ದಾರೆ.