ಬಿ.ವೈ ವಿಜಯೇಂದ್ರ ನೇಮಕ ಹೊಸ ಅಲೆ ಸೃಷ್ಟಿ- ಕಾರ್ಯಕರ್ತರ ಉತ್ಸಾಹ ಇಮ್ಮಡಿ

ಕಲಬುರಗಿ:ನ.12: ರಾಜ್ಯದ ಬಿಜೆಪಿ ನೂತನ ಅಧ್ಯಕ್ಷರಾಗಿ ವಿಜಯೇಂದ್ರರ ನೇಮಕವನ್ನು ಕೇಂದ್ರದ ವರಿಷ್ಠರು ಪ್ರಕಟಿಸಿದ್ದು, ಕಾರ್ಯಕರ್ತರಿಗೆ ಉತ್ಸಾಹ ಇಮ್ಮಡಿಗೊಳಿಸಿದೆಯಲ್ಲದೇ ಹೊಸ ಅಲೆ ಸೃಷ್ಟಿಸಿದಂತಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರರು ಹಾಗೂ ಶಾಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.‌

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪಕ್ಷವನ್ನು ವ್ಯಾಪಕವಾಗಿ ಸಂಘಟಿಸುವ ಅದರಲ್ಲೂ ಕ್ರಿಯಾಶೀಲತೆಯುಳ್ಳವರನ್ನು ನೇಮಕ ಮಾಡಬೇಕೆಂಬುದನ್ನು ಬಹುದಿನಗಳ ಕಾರ್ಯ ಪಕ್ಷದ ವರಿಷ್ಠ ಮಂಡಳಿ ಈ ಮೂಲಕ ಸಾಕಾರಗೊಳಿದೆಯಲ್ಲದೇ ಒಬ್ಬ ಸೂಕ್ತ ಯುವಕರನ್ನು ಅಧ್ಯಕ್ಷರನ್ನಾಗಿ ರಾಷ್ಟ್ರೀಯ ನಾಯಕತ್ವ ಗುರುತಿಸಿದ್ದು ಕೂಡ ಒಂದು ಆಶಾದಾಯಕ ಸಂಗತಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಕರ್ನಾಟಕದ ರಾಜಕಾರಣಕ್ಕೆ ಇದು ಒಂದು ಹೊಸ ತಿರುವು ಕೊಟ್ಟಿದೆ. ಹಿರಿಯರ ಮಾರ್ಗದರ್ಶನದಡಿ ಹೊಸ ಯುವ ಪಡೆ ಬಿಜೆಪಿಯನ್ನು ಕಟ್ಟುವ ಕೆಲಸವನ್ನು ತೆಗೆದುಕೊಂಡಿದೆ. ಬಿಜೆಪಿ ಯಾವತ್ತೂ ಕೂಡ ಕಾರ್ಯಕರ್ತರ ಒಂದು ಪಕ್ಷ. ಕಾರ್ಯಕರ್ತರನ್ನೇ ತಯಾರು ಮಾಡುವ, ಕಾರ್ಯಕರ್ತರ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಆ ಮೂಲಕ ಸಾಮಾಜಿಕ ಕಾರ್ಯ, ತನ್ಮೂಲಕ ರಾಷ್ಟ್ರದ ಕಾರ್ಯವನ್ನು ಬಿಜೆಪಿ ಸದಾ ಮಾಡುತ್ತ ಬಂದಿದೆ ಎಂದಿದ್ದಾರೆ.‌

ವಿಜಯೇಂದ್ರ ಅವರು ಬಹುವರ್ಷಗಳಿಂದ ಈ ಪಕ್ಷದ ಕಾರ್ಯವನ್ನು ಸಾಮಾನ್ಯ ಕಾರ್ಯಕರ್ತನ ರೂಪದಲ್ಲಿ ಮಾಡುತ್ತ ಬಂದವರು. ಯುವ ಮೋರ್ಚಾದ ಒಳಗಡೆ ನಮ್ಮ ವೈಚಾರಿಕ ಹಿನ್ನೆಲೆ ಒಳಗಡೆ 1995ರಿಂದ, ತಂದೆ ಯಡಿಯೂರಪ್ಪನವರು ಶಾಸಕರಾದ ಸಂದರ್ಭದಲ್ಲೇ ಬಿಜೆಪಿ ಕಾರ್ಯಕರ್ತರಾಗಿ (ಅವರು ಮುಖ್ಯಮಂತ್ರಿ ಆಗಿಲ್ಲದಿದ್ದಾಗಲೇ) ಯುವ ಮೋರ್ಚಾ ಜೊತೆಗೂಡಿ ಉಪಾಧ್ಯಕ್ಷರಾಗಿ ಬಳಿಕ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ರಾಜ್ಯದಾದ್ಯಂತ ಹೋರಾಟ ಮಾಡಿರುವುದು ಎಲ್ಲರ ಮನದಲ್ಲಿದೆ ಎಂದು ವಿವರಣೆ ನೀಡಿದ್ದಾರೆ.

ರಾಜ್ಯ ಉಪಾಧ್ಯಕ್ಷರಾಗಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಸಂಘಟಿಸಿದ ಅನುಭವ ಅವರಿಗಿದೆ. ರಾಜ್ಯದಲ್ಲಿ ಹಿಂದೆ ನಡೆದ ಅನೇಕ ಉಪಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದಾರೆ.
ಯುವಕರು ಹಾಗೂ ಹಿರಿಯ ನಾಯಕರನ್ನು ಒಗ್ಗೂಡಿಸಿ ಪಕ್ಷ ಕಟ್ಟುವ ಸಾಮರ್ಥ್ಯ ಬಿವೈವಿ ಅವರಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಚುನಾವಣೆಗಳಲ್ಲಿ ಪಕ್ಷ ಗಟ್ಟಿಗೊಂಡು ಅಧಿಕಾರ ಚಲಾವಣೆ ನಿರ್ವಹಿಸಲಿದೆ ಎಂದಿದ್ದಾರೆ.‌

ಕಾರ್ಯಕರ್ತನಾಗಿ ಪರಿಶ್ರಮ, ಪ್ರಯತ್ನದ ಮೂಲಕ ಸದಾ ಸರ್ವಥಾ ಕಾರ್ಯ, ಅಗಣಿತ ಸಮಯವನ್ನು ಪಕ್ಷಕ್ಕೆ ಕೊಡುವ ಬಿವೈವಿ ಅವರಾಗಿದ್ದಾರೆ. ಒಟ್ಟಾರೆ ಬಿಜೆಪಿ ರಾಷ್ಟ್ರೀಯ ಮಂಡಳಿಯು ಸಮಚಿತ್ತದಿಂದ ಒಬ್ಬ ನೈಜ ಕಾರ್ಯಕರ್ತನನ್ನು ಆಯ್ಕೆ ಮಾಡಿದೆ. ರಾಜ್ಯದ ಆರು ತಿಂಗಳ ಕಾಂಗ್ರೆಸ್ ಪಕ್ಷದ ವ್ಯಾಪಕ ಭ್ರಷ್ಟಾಚಾರ, ಅಸಮರ್ಥ ಸರಕಾರವಾಗಿ ಹೊರಹೊಮ್ಮಿರುವುದು, ಕರ್ನಾಟಕದ ಲೂಟಿ, ಜನಾದೇಶವನ್ನು ತಿರಸ್ಕರಿಸಿ ತುಷ್ಟೀಕರಣದ ರಾಜಕಾರಣಕ್ಕೆ ಅಂಟಿಕೊಂಡಿರುವ ಸರಕಾರದ ಕುರಿತು ಜನರಲ್ಲಿ ಈಗಲೇ ಜನಾಕ್ರೋಶದ ರೂಪದಲ್ಲಿ ಮಾರ್ಪಾಡಾಗಿದೆ. ಇದನ್ನು ಬರುವ ಲೋಕಸಭಾ ಸೇರಿ ಇತರ ಚುನಾವಣೆಗಳಲ್ಲಿ ಕ್ರೋಢೀಕರಿಸಿ ಬಿಜೆಪಿ ಮತ್ತೆ ವಿಜೃಂಭಿಸುವ ನಿಟ್ಟಿನಲ್ಲಿ ನೂತನ ರಾಜ್ಯಾಧ್ಯಕ್ಷರು ಶ್ರಮಿಸಲಿದ್ದಾರೆ.

ಪ್ರಮುಖವಾಗಿ ಕರ್ನಾಟಕದ ಕಳೆದ ವಿಧಾನಸಭೆಯ ಚನಾವಣೆಯ ಫಲಿತಾಂಶದ ಹಿನ್ನಡೆಯನ್ನು ಮೆಟ್ಟಿನಿಂತು, ಬಿಜೆಪಿ ಸದಾ ರಚನಾತ್ಮಕ ವಿರೋಧ ಪಕ್ಷವಾಗಿ ಹೊಸ ಅಧ್ಯಕ್ಷರ ರೂಪದಲ್ಲಿ ಪ್ರತಿ ಬೂತ್‍ನಲ್ಲೂ ಪಕ್ಷವನ್ನು ಪುನರ್ ಸಂಘಟನೆ ಮಾಡಿ, ಬರಲಿರುವ 2024ರ ಚುನಾವಣೆಯಲ್ಲಿ ಆದರಣೀಯ ನರೇಂದ್ರ ಮೋದಿಯವರನ್ನು ಪ್ರಧಾನಿಯರನ್ನಾಗಿ ಮಾಡಲು ಕರ್ನಾಟಕದಿಂದ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸುವ ಮೂಲಕ ವಿಧಾನಸಭಾ ಸೋಲನ್ನು ಮರೆಯುವ ಕಾರ್ಯ ಅಧ್ಯಕ್ಷರ ನೇತೃತ್ವದಲ್ಲಿ ಆಗಲಿದೆ. ಇಡೀ ಕಾರ್ಯಕರ್ತರ ತಂಡವು ನವೋತ್ಸಾಹದಿಂದ ಹೆಗಲಿಗೆ ಹೆಗಲನ್ನು ಕೊಡುತ್ತ, ಹೆಜ್ಜೆಗೆ ಹೆಜ್ಜೆ ಜೋಡಿಸಿ ರಾಜ್ಯ ಅಧ್ಯಕ್ಷರ ಜೊತೆ ಇಡೀ ಭಾರತೀಯ ಜನತಾ ಪಾರ್ಟಿ ಕೆಲಸ ಮಾಡಲಿದೆ. ತನ್ಮೂಲಕ ದೇಶದ ಕೆಲಸಕ್ಕೆ ಬದ್ಧವಾಗಲಿದೆ ಎಂದಿದ್ದಾರೆ.