ಬಿ.ವಿ.ನಾಯಕ, ಹನುಮಂತಪ್ಪ ಆಲ್ಕೋಡ್ ಕೈಗೆ ಗುಡ್‌ಬೈ : ಗಾಯದ ಮೇಲೆ ಬರೆ

ಬಾಬುಅಲಿ ಕರಿಗುಡ್ಡ
ದೇವದುರ್ಗ,ಏ.೨೭-
ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುತ್ತಿದ್ದಂತೆ ಗುಲಾಲ್ ಎರಚಿ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಕಾಂಗ್ರೆಸ್‌ಗೆ ಶೋಚನೀಯಸ್ಥಿತಿ ಎದುರಾಗಿದೆ. ದಿನ ಕಳೆದಂತೆ ಕೈ ಖಾಲಿಯಾಗುತ್ತಿದ್ದು ಒಂದೊಂದೆ ವಿಕೆಟ್ ಪಥನವಾಗುತ್ತಿದೆ. ಪ್ರಮುಖ ನಾಯಕರು ಕೈಕೊಟ್ಟು ಬಿಜೆಪಿ, ಜೆಡಿಎಸ್ ಸೇರ್ಪಡೆಯಾಗುತ್ತಿವುದು ಕೈಬುಡ ಅಲುಗಾಡುವಂತೆ ಮಾಡಿದೆ.
ವಾರದ ಹಿಂದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಂಸದ ಬಿ.ವಿ.ನಾಯಕ ಬಿಜೆಪಿ ಸೇರ್ಪಡೆಯಾಗಿ ಮಾನ್ವಿ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಇದು ತಾಲೂಕು ಕಾಂಗ್ರೆಸ್‌ಗೆ ದೊಡ್ಡ ಮರ್ಮಾಘಾತವಾಗಿತ್ತು. ಇದೀಗ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ಕೈಗೆ ಕೈಕೊಟ್ಟು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದು, ಸ್ಥಳೀಯ ಕೈ ನಾಯಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೇವದುರ್ಗ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಯಾರೆ ಪಕ್ಷ ತೊರೆದರೂ ತಳಮಟ್ಟದಲ್ಲಿ ದೊಡ್ಡ ಕಾರ್ಯಕರ್ತರ ಪಡೆಯೇಯಿತ್ತು. ಆದರೆ, ದಿನೇದಿನೆ ಕೈಕೋಟೆ ಕುಸಿಯುತ್ತಿದ್ದು, ಇಷ್ಟುದಿನ ದಿ.ಎ.ವೆಂಕಟೇಶ ನಾಯಕ ಕುಟುಂಬದ ಹಿಡಿತದಲ್ಲಿದ್ದ ಕೈಪಡೆ, ನಿಧನವಾಗಿ ಹಿಡಿತ ತಪ್ಪುತ್ತಿದೆ.
ಮಾಜಿ ಸಂಸದ ಬಿ.ವಿ.ನಾಯಕ ತಾಲೂಕಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿದ್ದರು. ಸೌಮ್ಯ ಸ್ವಭಾವ, ತಂದೆಯಂತೆ ಎಲ್ಲರನ್ನೂ ಒಳಗೊಳ್ಳುವ ಗುಣ ಅಪಾರ ಕಾರ್ಯಕರ್ತರನ್ನು ಸೆಳೆದಿದ್ದರು. ಅವರು ಪಕ್ಷ ತೊರೆದಿದ್ದು ಕಾಂಗ್ರೆಸ್‌ನ ಜಂಘಾಬಲವೇ ಕುಸಿದಂತಾಗಿದೆ. ಈಗ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಪಕ್ಷ ಬಿಟ್ಟಿರುವುದು ನುಂಗಲಾರದ ತುತ್ತಾಗಿದೆ.
ದಲಿತ ಎಡಗೈ ಸಮುದಾಯದ ಹನುಮಂತಪ್ಪ ಆಲ್ಕೋಡ್, ಹೋರಾಟದ ಮೂಲಕವೇ ಜನಪ್ರಿಯರಾಗಿದ್ದರು. ಜೆಡಿಎಸ್‌ನಿಂದ ಹುಬ್ಬಳಿ ಧಾರವಾಡ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿದ್ದರು. ಬಳಿಕ ೨೦೦೪ರಲ್ಲಿ ದೇವದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಅಂದಿನ ಜೆಡಿಎಸ್ ಬಿಜೆಪಿ ೨೦-೨೦ ಸರ್ಕಾರದಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದರು.
ಕ್ಷೇತ್ರ ಪುನರ್‌ವಿಂಗಡನೆ ನಂತರ ೨೦೦೮ರಲ್ಲಿಶಿರಹಟ್ಟಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿ ಕೆಪಿಸಿಸಿ ವಕ್ತಾರರಾಗಿದ್ದರು. ಮಾತಿನ ಮೂಲಕವೇ ಅಪಾರ ಅಭಿಮಾನಿಗಳು ಹಾಗೂ ಬೆಂಬಲಿಗರನ್ನು ಹೊಂದಿದ್ದ ಹನುಮಂತಪ್ಪ ಆಲ್ಕೋಡ್ ತಾಲೂಕಿನಲ್ಲಿ ಕಾಂಗ್ರೆಸ್‌ನ ದೊಡ್ಡ ನಾಯಕರಾಗಿದ್ದರು. ಜೆಡಿಎಸ್ ಸೇರ್ಪಡೆಯಿಂದ ತಾಲೂಕಿನಲ್ಲಿ ದಳ ಅಭ್ಯರ್ಥಿ ಕರೆಮ್ಮ ಜಿ.ನಾಯಕಗೆ ಅನುಕೂಲವಾಗಲಿದೆ.
ಕೈಗೆ ಕೈಕೊಟ್ಟ ನಾಯಕರು: ತಾಲೂಕಿನಲ್ಲಿ ಪ್ರಭಾವಿ ನಾಯಕರು ಪಕ್ಷ ತೊರೆದಿರುವುದು ಕಾಂಗ್ರೆಸ್ ದೊಡ್ಡ ಡ್ಯಾಮೇಜ್‌ಆಗುವ ಸಾಧ್ಯತೆಯಿದೆ. ಮಾಜಿ ಸಂಸದ ಬಿ.ವಿ. ನಾಯಕ, ಹನುಮಂತಪ್ಪ ಆಲ್ಕೋಡ್ ಬಿಟ್ಟಿರುವುದು ನಾಯಕ, ದಲಿತ ಸಮುದಾಯದ ಅತಿಹೆಚ್ಚು ಮತದಾರರು ಕೈಗೆ ದೂರವಾಗುವ ಸಾಧ್ಯತೆಯಿದೆ. ಈ ಹಿಂದೆ ಕಾಂಗ್ರೆಸ್ ಮಾಜಿ ಶಾಸಕ ಶರಣಪ್ಪ ಅಂಚೆಸುಗೂರು ಪುತ್ರ ಮಲ್ಲಿಕಾರ್ಜುನ ಪಾಟೀಲ್ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಮಾಜಿ ತಾಪಂ ಅಧ್ಯಕ್ಷ ಸಿದ್ದನಗೌಡ ಮೂಡಲಗುಂಡ, ಲಿಂಗಾಯತ ಸಮುದಾಯ ಪ್ರಭಾವಿ ಮುಖಂಡ ರಾಮನಗೌಡ ರಾಮದುರ್ಗ, ಮಾಜಿ ಶಾಸಕ ಸದಾಶಿವಪ್ಪ ಪಾಟೀಲ್ ಸುಪುತ್ರ ಶಿಖರೇಶ್ ಪಾಟೀಲ್ ಜೆಡಿಎಸ್ ಸೇರ್ಪಡೆಯಾಗಿದ್ದರೆ, ಮಾಜಿ ಶಾಸಕ ಯಲ್ಲಪ್ಪ ಅಕ್ಕರಕಿ ಇಬ್ಬರು ಪುತ್ರರು ಬಿಜೆಪಿ ಸೇರ್ಪಡೆಯಾಗಿದ್ದಾರೆ.