ಬಿ.ವಿ ನಾಯಕ್ ಪರ ಜಕ್ಕಲದಿನ್ನಿ ನಾಮಪತ್ರ ಸಲ್ಲಿಕೆ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಏ.೧೮:ಬಿಜೆಪಿಯಿಂದ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬಿ.ವಿ ನಾಯಕ್ ಇಂದು ನಾಮಪತ್ರ ಸಲ್ಲಿಸಿದರು.
ಬಿ.ವಿ ನಾಯಕ್ ಅವರು ನಾಮಪತ್ರ ಸಲ್ಲಿಕೆಗೆ ಖುದ್ದು ಹಾಜರಾಗಿರಲಿಲ್ಲ. ಅವರ ಸೂಚಕರಾಗಿ ಮಲ್ಲಿಕಾರ್ಜುನ ಜಕ್ಕಲದಿನ್ನಿ ಅವರು ಬಿ.ವಿ ನಾಯಕ್ ಅವರ ಪರವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಹಿತಿ ನೀಡಿದ ಜಕ್ಕಲದಿನ್ನಿ ಅವರು ಬಿ.ವಿ ನಾಯಕ್ ಅವರ ಸೂಚನೆ ಮೇರೆಗೆ ಅವರ ಪರವಾಗಿ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆಂದು ಮಾಹಿತಿ ನೀಡಿದರು.
ಬಿ.ವಿ ನಾಯಕ್ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ರಾಜಾಅಮರೇಶ್ವರ್ ನಾಯಕ್ ಅವರು ಮನವಿ ಸಲ್ಲಿಸಿದ್ದಾರೆ. ರಾಜಾಅಮರೇಶ್ವರ ನಾಯಕ್ ಅವರ ಜಾತಿಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ತೀರ್ಪು ಪ್ರಕಟವಾಗಲಿದೆ. ಬಿಜೆಪಿಯಿಂದ ರಾಜಾಅಮರೇಶ್ವರ ನಾಯಕ ಅವರ ಸ್ಪರ್ಧೆಗೆ ತೀರ್ಪಿನಿಂದೇನಾದರೂ ವ್ಯತಿರಿಕ್ತ ಪರಿಣಾಮ ಉಂಟಾದರೆ ಬಿಜೆಪಿ ಹೈಕಮಾಂಡ್ ಬಿ.ವಿ. ನಾಯಕ್ ಅವರಿಗೆ ಬಿ ಫಾರ್ಮ್ ನೀಡುವ ಸಾಧ್ಯತೆಗಳಿವೆ.
ಆನಂತರ ಬಿ.ವಿ ನಾಯಕ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದಾಗಿದೆ.ಆದರೆ, ನಾಳೆ ಕಲಬುರಗಿ ಉಚ್ಛ ನ್ಯಾಯಾಲಯ ರಾಜಾಅಮರೇಶ್ವರ್ ನಾಯಕ್ ಅವರ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ನೀಡುವ ತೀರ್ಪು ಬಿಜೆಪಿ ಅಭ್ಯರ್ಥಿ ರಾಜಾಅಮರೇಶ್ವರ ನಾಯಕರೋ ಅಥವಾ ಬಿ.ವಿ ನಾಯಕರೋ ಎನ್ನುವ ಗೊಂದಲಕ್ಕೆ ತೆರೆ ಎಳೆಯಲಿದೆ.