ಬಿ.ಎಸ್.ವೈ ಭವಿಷ್ಯ ನಾಳೆ ನಿರ್ಧಾರ

ಬೆಂಗಳೂರು, ನ. ೯- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಉಪ ಸಮರದ ಫಲಿತಾಂಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವರ್ಚಸ್ಸಿಗೆ ಅಗ್ನಿ ಪರೀಕ್ಷೆಯಾಗಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾಗಲಿದ್ದಾರೆ ಎನ್ನುವ ಊಹಾಪೋಹಗಳು ದಟ್ಟವಾಗಿರುವ ಮಧ್ಯೆ ನಾಳೆ ಪ್ರಕಟವಾಗುವ ಉಪ ಸಮರದ ಫಲಿತಾಂಶ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿರುವುದಂತೂ ಸತ್ಯ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಪರಾಭವಗೊಂಡು, ರಾಜ್ಯದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಟ್ಟ ಮತ್ತಷ್ಟು ಗಟ್ಟಿಯಾಗಲಿದೆ. ಇಲ್ಲದಿದ್ದರೆ ಊಹಾಪೋಹಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬರಲಿದೆ.
ಶಿರಾ ಮತ್ತು ಆರ್.ಆರ್ ನಗರ ಕ್ಷೇತ್ರದಲ್ಲಿ ಮತದಾರ ಯಾರಿಗೆ ಜೈ ಎನ್ನುತ್ತಾನೆ ಎನ್ನುವುದು ಸದ್ಯಕ್ಕಿರುವ ಕುತೂಹಲದ ಸಂಗತಿ. ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ರಾಜಕೀಯ ಹಣೆ ಬರಹಕ್ಕೆ ಈಗಾಗಲೇ ಮತದಾರ ಒತ್ತಿರುವ ಮುದ್ರೆ ಮತಯಂತ್ರಗಳಲ್ಲಿ ಭದ್ರವಾಗಿದೆ.ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬ ಕುತೂಹಲಕ್ಕೆ ನಾಳೆ ಉತ್ತರ ಸಿಗಲಿದೆ.
ಉಪಚುನಾವಣೆ ಫಲಿತಾಂಶ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದು, ಮೂರು ಪಕ್ಷಗಳು ಗೆಲುವು ಮತ್ತು ಮೈಲುಗೈಗಾಗಿ ಹಣಾಹಣಿ ನಡೆಸಿವೆ.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ, ಕಾಂಗ್ರೆಸ್‌ನ ಎಚ್. ಕುಸುಮಾ ಮತ್ತು ಜೆಡಿಎಸ್‌ನ ಕೃಷ್ಣಮೂರ್ತಿಯವರ ನಡುವೆ ಗೆಲುವಿಗಾಗಿ ಹಣಾಹಣಿ ನಡೆದಿದೆ.
ಸಿರಾದಲ್ಲಿ ಬಿಜೆಪಿಯ ಡಾ. ರಾಜೇಶ್‌ಗೌಡ, ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ, ಜೆಡಿಎಸ್‌ನ ಅಮ್ಮಾಜಮ್ಮನವರ ನಡುವೆ ತೀವ್ರ ಪೈಪೋಟಿ ಇದೆ.
ಕಳೆದ ನ. ೩ ರಂದು ಎರಡೂ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ನಾಳೆ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಕೈಗೊಂಡಿದೆ.
ಬಿಗಿ ಭದ್ರತೆ:
ನಾಳೆ ನಡೆಯಲಿರುವ ಮತ ಎಣಿಕೆ ನಡೆಯುವ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ರೀತಿಯ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ರಾಜರಾಜೇಶ್ವರಿ ನಗರ ಕ್ಷೇತ್ರ ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ ಮತ ಎಣಿಕೆ ಸಂದರ್ಭದಲ್ಲಿ ಹಾಗೂ ಫಲಿತಾಂಶ ಹೊರ ಬಿದ್ದ ನಂತರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿದೆ.
ರಾಜರಾಜೇಶ್ವರಿ ನಗರದಲ್ಲಿ ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸಮಾಜಘಾತುಕ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಳೆ ಬೆಳಿಗ್ಗೆ ೮ ಗಂಟೆಗೆ ಎರಡೂ ಕ್ಷೇತ್ರಗಳಲ್ಲೂ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ ೧ ಗಂಟೆಯೊತ್ತಿಗೆ ಫಲಿತಾಂಶಗಳು ಪ್ರಕಟವಾಗುವ ಸಾಧ್ಯತೆ ಇದೆ.

ನಾಳೆ ಶಿರಾ, ಆರ್ ಆರ್ ನಗರ ಉಪ ಸಮರದ ಮತ ಎಣಿಕೆ

ಬಿಜೆಪಿ, ಕಾಂಗ್ರೆಸ್, ಜೆ.ಡಿಎಸ್ ಪಕ್ಷಗಳಿಗೆ ಪ್ರತೀಷ್ಟೆ.

ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿ ಫಲಿತಾಂಶದ ಮೇಲೆ ನಿರ್ಧಾರ

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೂ ಗೆದ್ದರೆ ಸಿಎಂಗೆ ವರ

ಸೋತರೆ ಊಹಾಪೋಹಳಿಗೆ ಮತ್ತಷ್ಟು ರೆಕ್ಕೆಪುಕ್ಕ

ಮತ ಎಣಿಕೆ ಹಿನ್ನೆಲೆ ಬಿಗಿ ಭದ್ರತೆ

ಕೆಎಸ್‌ಆರ್‌ಪಿ ಸೇರಿದಂತೆ ಅರೆ ಸೇನಾ ಪಡೆ ನಿಯೋಜನೆ

ಮುಂಜಾಗ್ರತಾ ಕ್ರಮ

ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಶ್ಚಿಮ,ಪೂರ್ವ,ಸಿಸಿಬಿಯ ಹೆಚ್ಚುವರಿ ಆಯುಕ್ತರುಗಳಿಗೆ ಹಾಗೂ ಡಿಸಿಪಿಗಳಿಗೆ ಹೆಚ್ಚಿನ ಭದ್ರತೆ ಹೊಣೆ ನೀಡಲಾಗಿದೆ ನಗರ ಪೋಲೀಸ್ ಆಯುಕ್ತ ಎಂದು ಕಮಲ್ ಪಂತ್ ತಿಳಿಸಿದ್ದಾರೆ.
ಮತ ಎಣಿಕೆ ನಡೆಯುವ ಆರ್.ಆರ್ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ್ ಶಾಲೆ ಸುತ್ತ ಭದ್ರತೆ, ಮಲ್ಲೇಶ್ವರ ಬಿಜೆಪಿ ಕಚೇರಿ ಸುತ್ತ ಭದ್ರತೆ, ಕಾಂಗ್ರೆಸ್ ಕಚೇರಿ, ಅಭ್ಯರ್ಥಿಗಳ ಮನೆಯ ಸುತ್ತ ಯಾವ ರೀತಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.