ಬಿ.ಎಸ್.ವೈ ನಾಯಕತ್ವ ಅಭಾದಿತ

ಬೆಂಗಳೂರು, ಜು. ೮: ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ಶಿವಮೊಗ್ಗ ಸಂಸದ ರಾಘವೇಂದ್ರ ಅವರನ್ನು ಪರಿಗಣಿಸದಿರುವುದು ಯಡಿಯೂರಪ್ಪರವರ ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವ ಧ್ಯೋತಕ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸಚಿವ ಸಂಪುಟದಲ್ಲಿ ರಾಘವೇಂದ್ರ ಅವರಿಗೆ ಸಚಿವ ಸ್ಥಾನ ನೀಡಿ, ವಿಜಯೇಂದ್ರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿ ಯಡಿಯೂರಪ್ಪರವರ ನಾಯಕತ್ವ ಬದಲಾಯಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ ಎಂದೇ ಭಾವಿಸಿ ಕೆಲವು ಸಚಿವರೂ ಸೇರಿದಂತೆ ಹಲವಾರು ನಾಯಕರು ನಾಯಕತ್ವದ ವಿರುದ್ಧ ಭಿನ್ನರಾಗ ಎಳೆದಿದ್ದರು.
ಆದರೆ, ಈಗಿನ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸುವ ಸ್ಪಷ್ಟ ಸಂದೇಶವನ್ನು ಪ್ರಧಾನಿ ಮೋದಿ ಅವರು ರವಾನಿಸಿದ್ದಾರೆ.
ಆಂತರಿಕವಾಗಿ ಸಾಕಷ್ಟು ವಿರೋಧಗಳನ್ನು ಎದುರಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆಂಬಲಕ್ಕೆ ಹೈ ಕಮಾಂಡ್ ನಿಂತ ಮಾದರಿಯಲ್ಲೇ ರಾಜ್ಯದಲ್ಲೂ ಹೈಕಮಾಂಡ್ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿರುವುದು ಕೇಂದ್ರ ಸಂಪುಟ ಪುನಾರಚನೆಯಲ್ಲಿ ಜಗಜ್ಜಾಹೀರಾಗಿದೆ. ವರಿಷ್ಠರು ಹಿರಿಯ ಸಚಿವರಾಗಿದ್ದ ಸದಾನಂದಗೌಡ ಅವರನ್ನು ಸಂಪುಟದಿಂದ ಕೈ ಬಿಟ್ಟು ಹೊಸ ಮುಖಗಳಿಗೆ ಆಧ್ಯತೆ ನೀಡುವ ಮೂಲಕ ಯಡಿಯೂರಪ್ಪನವರ ಕೈ ಬಲಪಡಿಸುವ ಪ್ರಯತ್ನ ನಡೆಸಿರುವುದು ಸ್ಪಷ್ಟ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ವರಿಷ್ಠರಿಗೆ ಆಸಕ್ತಿ ಇಲ್ಲ. ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ತೃಪ್ತಿ ಇದೆ. ರಾಜ್ಯದ ಮಟ್ಟಿಗೆ ಯಡಿಯೂರಪ್ಪ ಒಬ್ಬರೇ ಬಿಜೆಪಿಯಲ್ಲಿ ಮತ ಸೆಳೆಯುವ ಜನ ನಾಯಕ ಎಂಬುದನ್ನು ವರಿಷ್ಠರು ಅರಿತಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ವರಿಷ್ಠರಿಗೆ ನಾಯಕತ್ವ ಬದಲಾವಣೆಯ ಆಸಕ್ತಿ ಇದ್ದಿದ್ದರೆ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಲು ಅವರ ಪುತ್ರ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತಿದ್ದರು. ನಾಯಕತ್ವ ಬದಲಾವಣೆ ವಿಚಾರ ವರಿಷ್ಠರ ಪರಿಶೀಲನೆಯಲ್ಲಿ ಇಲ್ಲ ಎಂಬುದು ಈ ಎಲ್ಲ ಬೆಳವಣಿಗೆಗಳು ದೃಢಪಡಿಸಿವೆ.
ಲಿಂಗಾಯತರ ಖೋಟಾದಡಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಲಹೆಯಂತೆ ಭಗವಾನ್ ಖೂಬಾ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಿ, ಯಡಿಯೂರಪ್ಪರವರ ಮಾತಿಗೆ ಮನ್ನಣೆ ನೀಡಿರುವುದು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ರವಾನಿಸಿದಂತಾಗಿದೆ.
ಬೆಳ್ಳಂದೂರು ಡಿ ನೋಟಿಫಿಕೇಷನ್ ಪ್ರಕರಣದ ತನಿಖೆಗೆ ನ್ಯಾಯಾಲಯ ಆದೇಶ ನೀಡಿದ್ದು, ಈ ಪ್ರಕರಣದಲ್ಲಿ ಯಡಿಯೂರಪ್ಪರವರಿಗೆ ಯಾವುದೇ ರೀತಿಯ ಸಂಕಷ್ಟಗಳು ಎದುರಾಗದಿದ್ದರೆ ಯಡಿಯೂರಪ್ಪನವರು ಮುಂದಿನ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ನಿಶ್ಚಿತ.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಅವರ ಬದಲಾಯಿಸುವಂತೆ ಅಲ್ಲಿನ ಭಿನ್ನಮತೀಯರು ಒತ್ತಡ ಹೇರಿದ್ದರು. ಆದರೆ ಭಿನ್ನಮತೀಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಸಂಪುಟದಲ್ಲಿ ಉತ್ತರ ಪ್ರದೇಶಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಯೋಗಿ ನೇತೃತ್ವದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಅಂತೆಯೇ ಯಡಿಯೂರಪ್ಪ ಅವರ ನಾಯಕತ್ವ ಬದಲಾಗದು ಎಂಬ ಸಂದೇಶ ರವಾನಿಸಿರುವ ಹೈಕಮಾಂಡ್, ನಾಲ್ವರು ಹೊಸಮುಖಗಳಿಗೆ ಸಂಪುಟದಲ್ಲಿ ಅವಕಾಶ ನೀಡಿ ಸದಾನಂದಗೌಡ ಅವರಿಗೆ ಖೊಕ್ ನೀಡಿದೆ.