ಬಿ.ಎಸ್.ವೈ. ಕಡೆಗಣನೆ ಅನ್ನೋದು ಕೇವಲ ವದಂತಿ: ವಿಜಯೇಂದ್ರ

ಕಲಬುರಗಿ,ಜ 7: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿಲ್ಲ. ಇದೊಂದು ವದಂತಿ ಮಾತ್ರ ಎಂದು ಬಿ.ಎಸ್.ವೈ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.
ಕಲಬುರಗಿಯ ಕಲ್ಲ ಹಂಗರಗಾ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಪಕ್ಷದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮೇಲಾಗಿ,
ಯಡಿಯೂರಪ್ಪನವರು ಕರ್ನಾಟಕದ ಮಟ್ಟಿಗೆ ಒಂದು ದೊಡ್ಡ ಶಕ್ತಿ ಎಂಬ ಮಾತನ್ನು ಸ್ವತಃ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಅನೇಕ ಬಾರಿ ಹೇಳಿದ್ದಾರೆ. ಬಿಜೆಪಿ ಗೆಲುವಿಗೆ ಯಡಿಯೂರಪ್ಪ ಅವರು ಶ್ರಮಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಯಡಿಯೂರಪ್ಪನವರ ಮುಂದಾಳತ್ವದಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿ 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪನವರು ಕಾರ್ಯೋನ್ಮುಖರಾಗಿದ್ದಾರೆ. ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ವದಂತಿಗೆ ಯಾರೂ ಕಿವಿಗೊಡುವುದು ಬೇಡ. ಈ ನಿಟ್ಟಿನಲ್ಲಿ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದರು.
ಪ್ರಿಯಾಂಕ್ ಖರ್ಗೆಗೆ ಟಾಂಗ್:
ಬಿಜೆಪಿ ಎಂದರೆ ಬ್ರೋಕರ್ ಪಾರ್ಟಿ ಮತ್ತು ವಿಧಾನಸೌಧ ಶಾಪಿಂಗ್ ಮಾಲ್ ಆಗಿಬಿಟ್ಟಿದೆ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿವೈ ವಿಜಯೇಂದ್ರ ತಿರುಗೇಟು ನೀಡಿದರು.ಪ್ರಿಯಾಂಕ್ ಅವರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ಕಳೆದುಕೊಂಡಿದೆ. ಈ ಹಿಂದೆ ಕಾಂಗ್ರೆಸ್ 300ಕ್ಕೂ ಅಧಿಕ ಲೋಕಸಭೆ ಸ್ಥಾನಗಳನ್ನ ಗೆದ್ದಿತ್ತು. ಇಂದು ಕಾಂಗ್ರೆಸ್ ಪಕ್ಷದ ಗತಿ ಏನಾಗಿದೆ? ಕೇವಲ 50-60 ಸ್ಥಾನಗಳನ್ನು ಮಾತ್ರ ಗೆದ್ದು ದಾರುಣ ಸ್ಥಿತಿಗೆ ತಲುಪಿದೆ. ಆ ಪಕ್ಷದ ಮುಖಂಡರು ಮಾಡಿದ್ದ ಭ್ರಷ್ಟಾಚಾರದಿಂದ ಕಾಂಗ್ರೆಸ್ ಅಧೋಗತಿಗೆ ತಲುಪಿದೆ. ಚುನಾವಣೆ ಬಂದಾಗ ವಿಪಕ್ಷಗಳ ಟೀಕೆ ಸಾಮಾನ್ಯ. ಆದರೆ ರಾಜ್ಯದ ಜನರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದರು.