ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಸರ್ಕಾರದಿಂದ ಸೇಡಿನ ರಾಜಕಾರಣ; ಎಂ.ಪಿ.ರೇಣುಕಾಚಾರ್ಯ ಆರೋಪ


ಸಂಜೆವಾಣಿ ವಾರ್ತೆ
ದಾವಣಗೆರೆ, ಜೂ.೧೪: ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ಹೀನಾಯ ಸೋಲು, ಬಿಜೆಪಿ ವಿರುದ್ಧದ ಅಪಪ್ರಚಾರದ ಹಿನ್ನೆಲೆ ರಾಹುಲ್ ಗಾಂಧಿಗೆ ಕೋರ್ಟ್‌ಗೆ ಮೆಟ್ಟಿಲೇರುವಂತೆ ಮಾಡಿದ್ದಕ್ಕೆ ಧೀಮಂತ ನಾಯಕ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣಕ್ಕೆ ಶುರು ಮಾಡಿದ್ದು, ಈ ಷಡ್ಯಂತ್ರದ ಹಿಂದಿರುವವರ ಹೆಸರನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎರಡಂತಿ ದಾಟಲಿಲ್ಲ. ಅಲ್ಲದೇ, ಬಿಜೆಪಿ ವಿರುದ್ಧ ಸುಳ್ಳು ಆರೋಪಕ್ಕಾಗಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರ ಮೇಲೆ ಬಿಜೆಪಿ ಕೇಸ್ ದಾಖಲಿಸಿದ್ದು, ರಾಹುಲ್ ಗಾಂಧಿ ಕೋರ್ಟ್‌ ಮೆಟ್ಟಿಲೇರಿದ ಸೇಡು ತೀರಿಸಿಕೊಳ್ಳಲು ಸೇಡಿನ ರಾಜಕಾರಣ ಮಾಡಿದ್ದಾರೆ ಎಂದರು. ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ, 60 ದಿನಕ್ಕೂ ಹೆಚ್ಚಾಗಿದೆ. ಪೋಕ್ಸೋ ಕೇಸ್ ದಾಖಲಾದ ದಿನವೇ ಗೃಹ ಸಚಿವ ಡಾ.ಜಿ.ಪರಮೇಶ್ವರ ದೂರುದಾರ ಮಹಿಳೆ ಸುಮಾರು 53 ಜನರ ಐಎಎಸ್‌, ಐಪಿಎಸ್ ಅಧಿಕಾರಿಗಳು, ಗಣ್ಯರ ವಿರುದ್ಧವೂ ಕೇಸ್ ದಾಖಲಿಸಿದ್ದಾಳೆ. ಆಕೆ ಮಾನಸಿಕ ಅಸ್ವಸ್ಥೆಯೆಂದು ಹೇಳಿದ್ದರು. ಆಕೆ ಆರೋಪಕ್ಕೆ ಆಧಾರ ಸಹ ಇಲ್ಲವೆಂದಿದ್ದರು. ಅನಾರೋಗ್ಯದಿಂದ ದೂರದಾರಳಾದ ಮಮತಾ ಸಾವನ್ನಪ್ಪಿದ್ದಾರೆ. ಮಮತಾ ವರ್ತನೆಯಿಂದ ಪ್ರತ್ಯೇಕವಾಗಿದ್ದ ಮಗನನ್ನು ಕರೆ ತಂದು, ಯಡಿಯೂರಪ್ಪ ವಿರುದ್ಧದ ಪ್ರಕರಣ ಮುನ್ನೆಲೆಗೆ ತಂದಿದ್ದಾರೆ ಎಂದು ಅವರು ಆರೋಪಿಸಿದರು. ದೂರುದಾರ ಮಹಿಳೆ ಮಮತಾ ಯಡಿಯೂರಪ್ಪ ನಿವಾಸಕ್ಕೆ ತಮ್ಮ ಮಗಳ ಸಮೇತ ಬಂದಿದ್ದಳು. ತನ್ನ ಪತಿಯ ಸೋದರ ಸಂಬಂಧಿಗಳು ಅಪ್ರಾಪ್ತಳಾದ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಆಗ ಯಡಿಯೂರಪ್ಪ ಆಯುಕ್ತರಿಗೆ ಹೇಳಿ, ನೊಂದ ಮಹಿಳೆಗೆ ನ್ಯಾಯ ಕೊಡಿಸಲು ಹೇಳಿದ್ದರು. ಆಲ್ಲದೇ, ಬಜಾಜ್‌ ಕಂಪನಿಯಿಂದ ತನಗೆ 5 ಸಾವಿರ ಕೋಟಿ ಬರಬೇಕಿದ್ದು, ಅದನ್ನು ಕೊಡಿಸುವಂತೆ ಆಕೆ ಒತ್ತಾಯಿಸಿದ್ದರು. ಮಹಿಳೆಗೆ ಅಷ್ಟೊಂದು ಹಣ ಎಲ್ಲಿಂದ ಬಂದಿತ್ತು? ಆಕೆಯ ಬ್ಯಾಂಕ್ ಖಾತೆ ಬಗ್ಗೆಯೂ ತನಿಖೆಯಾಗಲೀ. ಆಕೆ ಸುಳ್ಳು ಹೇಳಿದ್ದಳಾ ಎಂಬ ತತ್ಯಾಸತ್ಯತೆ ಸಹ ಗೊತ್ತಾಗಲಿದೆ ಎಂದು ಎಂದು ಅವರು ತಿಳಿಸಿದರು.ಗೃಹ ಸಚಿವ ಡಾ.ಪರಮೇಶ್ವರ ಅಂದೇ ಹೇಳಿದಂತೆ ಇದೊಂದು ರಾಜಕೀಯ ಪ್ರೇರಿತ ಕೇಸ್‌ ಆಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಅಭಿಯಾನ ಕೈಗೊಂಡಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿ ನ್ಯಾಯಾಲಯದ ಮೆಟ್ಟಿಲೇರಿತ್ತು. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹೀಗೆ ಕಾಂಗ್ರೆಸ್ಸಿನ ನಾಯಕರು ನ್ಯಾಯಾಲಯಕ್ಕೆ ಹಾಜರಾಗ ಬೇಕಾಯಿತು. ಲೋಕಸಭೆ ಚುನಾವಣೆಯಲ್ಲೂ ಎರಡಂಕಿ ದಾಟಲಾಗದ ಕಾಂಗ್ರೆಸ್ ಸೇಡಿನ ರಾಜಕಾರಣಕ್ಕೆ ಮುಂದಾಗಿದೆ ಎಂದು ಅವರು ಆರೋಪಿಸಿದರು. ವಿಚಾರಣೆಗೆ ಬಿಎಸ್‌ವೈ ಬೇಡವೆಂದು ಸಿಐಡಿ ಅಧಿಕಾರಿಗಳು ಅಂದೇ ಹೇಳಿದ್ದರು. ಒಂದು ವೇಳೆ ಬಿಎಸ್‌ವೈ ವಿರುದ್ಧದ ಆರೋಪಗಳಂತೆ ಸಾಕ್ಷ್ಯಗಳಿದ್ದರೆ ಅವುಗಳನ್ನು ನಾಶಪಡಿಸಲು ಯಡಿಯೂರಪ್ಪನವರಿಗೆ ಆಗುತ್ತಿರಲಿಲ್ಲವೇ? ವಾಲ್ಮೀಕಿ ಅಭಿವೃದ್ಧಿ ನಿಗಮದ 180 ಕೋಟಿ ರು. ಹಗರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಸತ್ತು ಹೋಗಿದ್ದ ಕೇಸ್‌ಗೆ ಮರು ಜೀವ ನೀಡಿದ ಕಾಂಗ್ರೆಸ್ ಸರ್ಕಾರ ಸಿಐಡಿ ಮೂಲಕ ಬಿಎಸ್‌ವೈಗೆ ನೋಟೀಸ್‌ ಕೊಡಿಸಿದೆ. ಯಡಿಯೂರಪ್ಪ ತಲೆ ಮರೆಸಿಕೊಂಡಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಅವರು ತಿಳಿಸಿದರು. 

ಧೀಮಂತ ನಾಯಕ ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಮಾಡಿರುವ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನವಾಗಲಿದೆ. ರಾಜ್ಯವ್ಯಾಪಿ ಬಿಜೆಪಿ ಹೋರಾಟ ನಡೆಸಲಿದೆ. ಮೃತ ಮಮತಾರ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಆಕೆಯ ಸಂಬಂಧಿಗಳನ್ನು ಯಾಕೆ ಬಂಧಿಸಿಲ್ಲ? ಬಿಎಸ್‌ವೈ ಕೇಸ್‌ಗೆ ಮರುಜೀವ ನೀಡಿದ ಸರ್ಕಾರ ಮೃತ ಮಮತಾ ಆರೋಪಿಸಿದ್ದ 53 ಜನ ಐಎಎಸ್, ಐಪಿಎಸ್‌, ಗಣ್ಯರು, ರಾಜಕೀಯ ನಾಯಕರನ್ನೂ ಬಂಧಿಸಲಿ ಎಂದು ರೇಣುಕಾಚಾರ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರಿಗೆ ಸವಾಲು ಹಾಕಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಸಂತೇಬೆನ್ನೂರು ಬಸವರಾಜ ಇತರರು ಇದ್ದರು.