ಬಿ.ಎಸ್.ಎಸ್.ಕೆ ಯಂತ್ರಗಳನ್ನು ಎಂ.ಜಿ.ಎಸ್.ಎಸ್.ಕೆಗೆ ಶಿಫ್ಟ್ ಮಾಡಿದವರು ಈಶ್ವರ್ ಖಂಡ್ರೆ: ಖೂಬಾ ಆರೋಪ

ಬೀದರ್:ಅ.3: ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿನ ಯಂತ್ರೋಪಕರಣಗಳನ್ನು ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಶಿಫ್ಟ್ ಮಾಡಿದವರು ಈಶ್ವರ್ ಖಂಡ್ರೆ ಅವರು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಗಂಭೀರ ಆರೋಪ ಮಾಡಿದರು.
ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ನಿರ್ಲಜ್ಜ, ಕೈಲಾಗದವನು ಏನೂ ಕೆಲಸ ಮಾಡಿಲ್ಲ ಎಂದು ಆರೋಪಿಸುತ್ತಿರುವ ಈಶ್ವರ ಖಂಡ್ರೆ ಅವರು, ಮೊದಲು ನೀವು ಯಾರ ಕೈಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಮನಗಂಡು ಮಾತನಾಡಿ ನೀವು ಶಾಮನೂರು ಶಿವಶಂಕರಪ್ಪ ಅವರ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೀರಿ ಎಂಬುದು ಅರಿವಿರಲಿ. ಲಿಂಗಾಯತ ಅಧಿಕಾರಿಗಳಿಗೆ ಈ ರಾಜ್ಯದಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಅವರು ಗಂಭೀರ ಆರೋಪ ಮಾಡಿದಾಗ ನಿಮ್ಮ ಪ್ರತ್ಯುತ್ತರವೇನು? ಏಕೆ ಮೌನವಾಗಿದ್ದೀರಿ? ಎಂದು ಪ್ರಶ್ನೆ ಮಾಡಿದ ಖೂಬಾ ಅವರು, ಡಿಸಿಸಿ ಬ್ಯಾಂಕಿನ ಚುನಾವಣೆ ಮೊದಲು ನಡೆದೆ ಇಲ್ಲ ಎಂದು ಹೇಳುತ್ತಿದ್ದೀರಲ್ಲ ಈ ಹಿಂದೆ ಎರಡು ಬಾರಿ ನಿಮ್ಮ ಸಹೋದರ ಅಮರ ಖಂಡ್ರೆ ಅವರು ನಿರ್ದೇಶಕರಾಗಿದ್ದರು. ರಾಜಶೇಖರ ಪಾಟೀಲ್ ಅವರ ಸಹೋದರ ಭೀಮರಾವ್ ಪಾಟೀಲ್ ಅವರು ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಹಾಗಾದರೆ ಇದು ನಿಮಗೆ ಅರಿವಿಲ್ಲವೇ?. ಇದು ನಿಮ್ಮ ನಿರ್ಲಕ್ಷತನದ ಪರಮಾವಧಿ ಎಂದು ಆರೋಪಿಸಿದರು,
ಬೀದರ್ ನಿಂದ ಭಾಲ್ಕಿಗೆ ನಿಮ್ಮ ವಾಹನ 120 ಸ್ಪೀಡ್ ಹೋಗುತ್ತಿದೆಯಲ್ಲ ಆ ರಸ್ತೆ ಮಾಡಿದವನು ನಾನು ಎಂಬುದು ನಿಮಗೆ ಅರಿವಿರಲಿ. ಬೀದರ್ ನಿಂದ ಬೆಂಗಳೂರಿಗೆ ನಿತ್ಯ ವಿಮಾನದಲ್ಲಿ ಹಾರುತ್ತಿರಲ್ಲ. ಆ ವಿಮಾನ ತಂದವನು ನಾನೇ ಎಂಬುದು ನಿಮಗೆ ಗೊತ್ತಿರಲಿ. ಐದಾರು ರೈಲುಗಳು ಹೊರತುಪಡಿಸಿ ಬೇರೆ ಯಾವ ರೈಲುಗಳು ಬೀದರ್ನಲ್ಲಿ ಇಲ್ಲದಿದ್ದಾಗ ಇಂದು 15 ಕ್ಕೂ ಅಧಿಕ ರೈಲುಗಳು ಬೀದರ್ನಲ್ಲಿ ಓಡಾಡಲು ನಾನು ಪಟ್ಟ ಶ್ರಮ ನಿಮಗೆ ಗೊತ್ತಿರಲಿ. ಅನುಭವ ಮಂಟಪಕ್ಕೆ ಅನುದಾನದ ಕೊರತೆಯಾಗುತ್ತಿದ್ದು ಕೂಡಲೇ ನಿಮ್ಮ ಸರ್ಕಾರ 200 ಕೋಟಿ ರೂಪಾಯಿ ಬಿಟ್ಟು ಮಿಕ್ಕ ಹಣವನ್ನು ರಿಲೀಸ್ ಮಾಡಲು ನೀವು ಮುತುವರ್ಜಿ ವಹಿಸುತ್ತಿಲ್ಲ. ಅದನ್ನು ಹೊರತುಪಡಿಸಿ ನನ್ನ ಮೇಲೆ ಗಂಭೀರ ಆರೋಪ ಮಾಡಲು ಮುಂದಾಗಿದ್ದೀರಿ ಇದು ನಾಚಿಕೆಗೇಡಿನ ಸಂಗತಿ ಎಂದು ಹರಿಹೈದರು,
ಉಲ್ಟಾ ಚೋರ್ ಕೊತ್ವಾಲ್ ಕೋಡ್ ಡಾಟೆ
“ಉಲ್ಟಾ ಚೋರ್ ಕೊತ್ವಾಲ್ ಕೋ ಡಾಟೇ” ಎನ್ನುವಂತೆ ನೀವೇ ಎಲ್ಲ ತಪ್ಪು ಮಾಡಿ ಆ ತಪ್ಪುಗಳನ್ನು ನನ್ನ ಹೆಗಲಿಗೆ ಸೇರಿಸುತ್ತಿದ್ದೀರಲ್ಲ ನಿಮಗೆ ನಾಚಿಕೆಯಾಗಬೇಕು. 1999 ರಲ್ಲಿ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗಾದಿ ಬಿಡುವ ಸಂದರ್ಭದಲ್ಲಿ ನೀವು ಆಗ ಚುನಾವಣೆಯಲ್ಲಿ ಸೋತಿದ್ದೀರಿ ಎಂಬುದು ಅರಿವಿರಲಿ. ನಿಮಗೆ ಮಾನ ಮರ್ಯಾದೆ ಇದ್ದರೆ ನೀವು ನಿಮ್ಮ ತಮ್ಮನಿಗೆ ಅಧ್ಯಕ್ಷನಾಗಿ ಮಾಡದೆ, ರಾಜಶೇಖರ್ ಪಾಟೀಲ್ ಅವರು ಅವರ ತಮ್ಮನಿಗೆ ಉಪಾಧ್ಯಕ್ಷರಾಗಿ ಮಾಡದೆ ಒಬ್ಬ ಸಾಮಾನ್ಯ ರೈತರಿಗೆ ಅಧ್ಯಕ್ಷ- ಉಪಾಧ್ಯಕ್ಷ ಗಾದೆ ಕೊಡಿಸಿ ನೋಡೋಣ ಎಂದು ಸವಾಲು ಎಸೆದರು.
ನನ್ನ ವಿರುದ್ಧ ರಾಹುಲ್ ಗಾಂಧಿಯನ್ನು ಚುನಾವಣೆಯಲ್ಲಿ ತಂದು ನಿಲ್ಲಿಸಲಿ
ಎ.ಐ ಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಬಂದು ಬೀದರ್ನಲ್ಲಿ ನನ್ನ ವಿರುದ್ಧ ಚುನಾವಣೆಯಲ್ಲಿ ನಿಂತರೂ ನಾನು ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ಶತಸಿದ್ಧ. ಪಾಪ ರಜಶೇಖರ ಪಾಟೀಲ ಖಂಡ್ರೆ ಅವರ ಪಾಲಿಸಿ ಮಾತಿಗೆ ಮರುಳಾಗದೇ ನಿಮ್ಮ ತಮ್ಮ ಹಾಗೂ ನಿಮಗೆ ಗೌರವ ನೀಡಿರುವ ಉಮಾಕಾಂತ ನಾಗಮಾರಪಳ್ಳಿ ಅವರ ಪರವಾಗಿ ನಿಂತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ್ನು ಸಾಹುಕಾರರ ಕೈಗೆ ಹೋಗುವುದನ್ನು ತಪ್ಪಿಸಿ. ನಾನೊಬ್ಬ ಈ ಜಿಲ್ಲೆಯ ಸಂಸದನಾಗಿ ರೈತರ ಹಿತ ಕಾಪಾಡೋ ಉದ್ದೇಶದಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಹಿತದೃಷ್ಟಿಯಿಂದ ನಾಗಮಾರಪಳ್ಳಿ ಕುಟುಂಬ ಪರವಾಗಿ ನಿಂತಿರುವೆ. ಚುನಾವಣೆಯಲ್ಲಿ ಉಮಾಕಾಂತ ನಾಗಮಾರಪಳ್ಳಿ ಪೆನಾಲ್ ಗೆಲ್ಲುವುದು ಸೂರ್ಯ-ಚಂದ್ರ ಎಷ್ಟು ಸತ್ಯವೋ ಗೆಲ್ಲುವುದು ಅಷ್ಟೇ ಸತ್ಯ ಎಂದು ಖೂಬಾ ಸ್ಪಷ್ಟಪಡಿಸಿದರು.