ಬಿ.ಎಲ್.ಡಿ.ಇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೂತ್ರ ಪಿಂಡ ಕಸಿ ಶಸ್ತ್ರ ಚಿಕಿತ್ಸೆ: ಡಾ.ಆರ್.ಎಸ್. ಮುಧೋಳ

ವಿಜಯಪುರ, ಜ. 19: ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಬಿಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯ ಉಪ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದರು.
ಈ ಮುಂಚೆ ತಿಳಿಸಿದಂತೆ ಆಸ್ಪತ್ರೆ ದಾಖಲಾದ ಮೊದಲ ಐದು ಜನರಿಗೆ ಉಚಿತ ಕಿಡ್ನಿ ಕಸಿ ಯೋಜನೆಯಂತೆ ಈಗ ಮೊದಲ ರೋಗಿಗೆ ಉಚಿತವಾಗಿ ಮೂತ್ರಪಿಂಡ ಕಸಿ ಮಾಡಲಾಗಿದೆ. ಅಲ್ಲದೇ, ನಮ್ಮ ಆಸ್ಪತ್ರೆಯಲ್ಲಿ ಮಾಡಲಾಗುವ ಶಸ್ತ್ರಚಿಕಿತ್ಸೆ ವೆಚ್ಚದಲ್ಲಿ ರಾಜ್ಯದ ಉಳಿದ ಆಸ್ಪತ್ರೆಗಳಿಗೆ ಹೋಲಿಸಿದರೆ 2-3 ಪಟ್ಟು ಕಡಿಮೆಯಿದೆ. ಇಲ್ಲಿನ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಸೇವೆ ರೋಗಿಗಳಿಗೆ ಸಿಗುತ್ತಿದೆ. ಸಂಸ್ಥೆಯ ಅಧ್ಯಕ್ಷ . ಎಂ.ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಶೀಘ್ರದಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭವಾಗಲಿದೆ. ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿರುವ ರೋಗಿಗಳ ಬೆಡ್ ಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯ ಜನ ಚಿಕಿತ್ಸೆಗಾಗಿ ಬೇರೆ ಊರುಗಳಿಗೆ ತೆರಳುವ ಸಂಕಷ್ಟವನ್ನು ತಪ್ಪಿಸಲು ನಾವು ಬಹುತೇಕ ಎಲ್ಲ ಚಿಕಿತ್ಸೆಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ.
ಬಿಹಾರ ಮೂಲದ 17 ವರ್ಷದ ಯುವಕನಿಗೆ ಮೂತ್ರಪಿಂಡ ಕಸಿ ಮಾಡಿದ್ದೇವೆ. ಈ ಯುವಕನಿಗೆ ಆತನ ತಾಯಿ ಕಿಡ್ನಿ ದಾನ ಮಾಡಿದ್ದಾರೆ. ರೋಗಿಯು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ ಎಂದರು.
ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಈಗ ಮೂತ್ರಪಿಂಡ ಕಸಿ ಮಾಡುವ ಮೂಲಕ ನಮ್ಮ ವೈದ್ಯರು ಈ ಭಾಗದ ರೋಗಿಗಳ ಪಾಲಿಗೆ ವರದಾನವಾಗಿದ್ದಾರೆ. 17 ವರ್ಷದ ಈ ರೋಗಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಇದರಿಂದ ಈ ಯುವಕನ ಶಸ್ತ್ರಚಿಕಿತ್ಸೆ ಮತ್ತು ನಿರ್ವಹಣೆಗೆ ತಗಲುವ ವೆಚ್ಚವನ್ನೂ ಗಣನೀಯವಾಗಿ ಕಡಿಮೆ ಮಾಡಿದಂತಾಗಿದೆ. ಈಗ ನಮ್ಮ ಆಸ್ಪತ್ರೆಯಲ್ಲಿಯೇ ಮೂತ್ರಪಿಂಡ ಕಸಿ ಸೌಲಭ್ಯ ಲಭ್ಯ ಇರುವುದರಿಂದ ಈ ಭಾಗದ ಜನ ಯುರಾಲಜಿ ಶಸ್ತ್ರಚಿಕಿತ್ಸೆಗಳಿಗಾಗಿ ದೂರದ ಊರುಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ತಿಳಿಸಿದರು.
ಮೂತ್ರಪಿಂಡ ಕಸಿಯ ಬಗ್ಗೆ ತಮಗೆಲ್ಲರಿಗೂ ಗೊತ್ತಿರುವಂತೆ ಜನಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಮತ್ತು ಭಯ ಇರುತ್ತದೆ. ಅಲ್ಲದೇ, ದಾನಿಗಳ ಕೊರತೆಯೂ ಶಸ್ತ್ರಚಿಕಿತ್ಸೆಗೆ ಹಿನ್ನೆಡೆ ಉಂಟು ಮಾಡುತ್ತಿದೆ. ನಮ್ಮ ದೇಶದಲ್ಲಿ ದಾನಿಗಳು ಮತ್ತು ಅಂಗಾಂಗ ಕಸಿ ಅಗತ್ಯವಿರುವ ರೋಗಿಗಳ ಸಂಖ್ಯೆಯ ನಡುವೆ ಗಮನಾರ್ಹ ಅಂತರವಿದೆ. ಹೀಗಾಗಿ ಈ ಅಂತರವನ್ನು ಕಡಿಮೆ ಮಾಡಲು ನಾವು ಮೆದುಳು ನಿಷ್ಕ್ರಿಯಗೊಂಡ ರೋಗಿಗಳ ಅಂಗಾಂಗಗಳನ್ನು ತೆಗೆದು ಅಗತ್ಯ ಇರುವ ರೋಗಿಗಳಿಗೆ ಆ ಅಂಗಾಂಗಗಳನ್ನು ಕಸಿ ಮಾಡಲು ಎಲ್ಲ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಸೌಲಭ್ಯಗಳನ್ನು ಹೊಂದಿದ್ದೇವೆ. ಈ ಮೂಲಕ ನಮ್ಮ ಆಸ್ಪತ್ರೆಯಲ್ಲಿ ಅಂಗಾಗ ಕಸಿ ಶಸ್ತ್ರಚಿಕಿತ್ಸೆಯನ್ನು ಸಕ್ರಿಯಗೊಳಿಸಿದ್ದೇವೆ ಎಂದು ನುಡಿದರು.
ಈ ಸೌಲಭ್ಯವನ್ನು ಪಡೆಯಲು ಮೂತ್ರಪಿಂಡ ವೈಫಲ್ಯದ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ನಮ್ಮಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಮ್ಮಲ್ಲಿ ನೋಂದಾಯಿಸಲು ಮತ್ತು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಲು ಮೊಬೈಲ್ ಸಂಖ್ಯೆ 6366786004 ಸಂಪರ್ಕಿಸಲು ತಿಳಿಸಿದರು.
ಈಗ ಯಶಸ್ವಿಯಾಗಿ ನಡೆಸಲಾದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ, ಡಾ. ದಿಲೀಪ ಜವಳಿ, ಡಾ. ವಿ. ಎಸ್. ಕುಂದರಗಿ, ಡಾ. ಸಂತೋಷ ಪಾಟೀಲ, ಡಾ. ಸಂದೀಪ ಪಾಟೀಲ, ಡಾ. ಭುವನೇಶ ಆರಾಧ್ಯ ಮತ್ತು ವಿಭಾಗದ ಎಲ್ಲ ಸ್ನಾತಕೋತ್ತರ ಪದವೀಧರರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದರು.
ಡಾ. ಎಸ್. ಬಿ. ಪಾಟೀಲ ಮಾತನಾಡಿ, ರೋಗಿ ಈಗ ಗುಣಮುಖನಾಗಿದ್ದಾನೆ. ನಮ್ಮ ಆಸ್ಪತ್ರೆಯಲ್ಲಿ ಇರುವ ಅತ್ಯಾಧುನಿಕ ಸೌಲಭ್ಯಗಳನ್ನು ಪರಿಗಣಿಸಿ ಬಿಹಾರದ ರೋಗಿ ನಮ್ಮಲ್ಲಿಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಮ್ಮಲ್ಲಿರು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯ ಟೀಂ ವರ್ಕ್ ಚೆನ್ನಾಗಿದೆ. ಕಿಡ್ನಿಕಸಿ ದುಬಾರಿಯಾಗಿದ್ದು, ಈ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಹೊರೆಯಾಗದಂತೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಈ ಯಶಸ್ಸಿಗೆ ವಿವಿಯ ಕುಲಾಧಿಪತಿ ಡಾ. ಎಂ. ಬಿ. ಪಾಟೀಲ, ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಉಪಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಇನಾಮದಾರ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ ಡಾ. ಆರ್. ಎಂ. ಹೊನ್ನುಟಗಿ ಮತ್ತು ಉಪಪ್ರಾಚಾರ್ಯ ಡಾ. ಆನಂದ ಪಾಟೀಲ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.