ಬಿ.ಎಂ.ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ರೋಗಿಗಳ ಪಾಲಿಗೆ ವರದಾನ

ವಿಜಯಪುರ:ಜ.19: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ. ಡೀಮ್ಡ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಹೃದ್ರೋಗ ಮತ್ತು ಮೂತ್ರಜನಕಾಂಗ ರೋಗಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ ಎಂದು ಡೀಮ್ಡ್ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಅತ್ಯಾದುನಿಕ ಫಿಲಿಫ್ಸ್, ಅಝೂರಿಯಾನ್ ಎಂ. 20 ಹೃದ್ರೋಗ ಡಯಾಗ್ನಾಸ್ಟ್ರಿಕ್ ಕ್ಯಾಥÀಲ್ಯಾಬ್ ಸೌಲಭ್ಯ ಇಲ್ಲಿ ಲಭ್ಯವಿದೆ. ದಿನದ 24 ಗಂಟೆಗಳ ಕಾಲ ನುರಿತ ತಜ್ಞ ವೈದ್ಯರು, ನರ್ಸಗಳು ಹಾಗೂ ಅರೇ ವೈದ್ಯಕೀಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ಕ್ಯಾಥಲ್ಯಾಬ್, ಐಸಿಸಿಯು, ಸಿಸಿಯು, ಆಪರೇಷನ್ ಥೇಟರ್‍ಗಳು ರೋಗಿಗಳ ಪಾಲಿಗೆ ವರದಾನವಾಗಿವೆ.

ವಾರ್ಷಿಕವಾಗಿ ಸುಮಾರು 200 ಆ್ಯಂಜಿಯೋಪ್ಲಾಸ್ಟಿಕ್ ಮತ್ತು 600 ಆ್ಯಂಜಿಯೋಗ್ರಾಫಿ ಹಾಗೂ ಹೃದಯಕ್ಕೆ ಪೇಸಮೇಕರ್ ಅಳವಡಿಕೆ ಮೂಲಕ ಇಲ್ಲಿನ ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಬಿ ಎಲ್. ಡಿ. ಇ. ಡೀಮ್ಡ್ ವಿವಿ ಕುಲಾಧಿಪತಿ ಎಂ.ಬಿ.ಪಾಟೀಲ ಅವರ ಜನಪರ ಕಾಳಜಿಯ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಶೇ. 25 ರಷ್ಟು ರಿಯಾಯತಿ ದರದಲ್ಲಿ ಆ್ಯಂಜಿಯೋಗ್ರಾಫಿ ದರ ನಿಗದಿಪಡಿಸಲಾಗಿದೆ. ಅಲ್ಲದೇ ಬಿ.ಪಿ.ಎಲ್. ರೇಷನ್‍ಕಾರ್ಡುದಾರರಿಗೆ ಉಚಿತವಾಗಿ ಮತ್ತು ಎ.ಪಿ.ಎಲ್. ಕಾರ್ಡುದಾರರಿಗೆ ಅತಿ ಕಡಿಮೆ ದರದಲ್ಲಿ ಹೃದ್ರೋಗ ಮತ್ತು ಮೂತ್ರಜನಕಾಂಗ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ.

ಅಷ್ಟೇ ಅಲ್ಲ ಈ ವರ್ಷ ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿ, ಹೃದ್ರೋಗಿಗಳನ್ನು ಗುರುತಿಸಿ, ಅವರಿಗೆ ಅತಿ ಕಡಿಮೆ ದರದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಕೊಡಲಾಗುತ್ತಿದೆ.

ಅತಿ ಶೀಘ್ರದಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಹಾಗೂ ತೆರೆದ ಹೃದಯದ ಶಸ್ತ್ರಚಿಕಿತ್ಸೆಗಳನ್ನು ಪ್ರಾರಂಭಿಸಲಾಗುವುದು. ಇದರಿಂದ ಬಡರೋಗಿಗಳು ಬೇರೆ ದೂರದ ಊರುಗಳಿಗೆ ಹೋಗುವುದು ತಪ್ಪಲಿದೆ ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯಬಹುದು ಎಂದು ಡಾ. ಆರ್. ಎಸ್. ಮುದೋಳ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವೀರಣ್ಣ ಎಸ್.ಜೆ.-9880390666 ಅವರನ್ನು ಸಂಪರ್ಕಿಸಬಹುದಾಗಿದೆ.