ಬಿ.ಎಂ.ಎಂ. ಕಾರ್ಖಾನೆಯಲ್ಲಿ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.15:  ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಕಾರ್ಮಿಕರು ತಮ್ಮ ಕರ್ತವ್ಯದ ಜೊತೆ ಸುರಕ್ಷತೆಗೂ ಹೆಚ್ಚು ಮಹತ್ವ ನೀಡಬೇಕು ಎಂದು ಬಿ.ಎಂ.ಎಂ.ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿಮಲ್ ಸಿಂಗ್ ಅಭಿಪ್ರಾಯಪಟ್ಟರು.
ಅವರು ಪಟ್ಟಣಕ್ಕೆ ಸಮೀಪದ ಡಣಾಪುರ ಬಳಿಯ ಬಿ.ಎಂ.ಎಂ. ಸಂಸ್ಥೆಯ ಸಭಾಂಗಣದಲ್ಲಿ ನಡೆದ 52 ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ದೇಶವು ಪ್ರಗತಿಪಥದತ್ತ ಸಾಗಬೇಕಾದರೆ ಕೃಷಿಯ ಜೊತೆ ಕೈಗಾರಿಕೆಯ ಪಾತ್ರವೂ ಮಹತ್ವದ್ದಾಗಿದೆ. ಸುರಕ್ಷತೆಯ ಕುರಿತು ಕಂಪನಿಯು ನೀಡಿರುವ ಎಲ್ಲಾ ಸುರಕ್ಷತಾ ಸಾಧನಗಳನ್ನು ತಪ್ಪದೇ ಬಳಸಬೇಕು ಎಂದರು. ಸುರಕ್ಷತೆ ಎಂಬುವುದು ಸ್ವಯಂ ಪ್ರೇರಣೆಯಿಂದಲೇ ಜಾಗೃತವಾಗಬೇಕು. ಕಾರ್ಮಿಕರನ್ನು ಅಪಾಯದಿಂದ ಕಾಪಾಡುವ ನಿಟ್ಟಿನಲ್ಲಿ ಸುರಕ್ಷತಾ ಸಲಕರಣೆ ಮತ್ತು ವೈಯಕ್ತಿಕ ಸುರಕ್ಷತಾ ಉಪಕರಣಗಳ ಬಳಕೆ ಕುರಿತು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಬಹು ಮುಖ್ಯ ಹಾಗೂ ಮಹತ್ವದ ಉದ್ದೇಶವಾಗಿದೆ ಎಂದರು. ಅಲ್ಲದೇ ಕೈಗಾರಿಕಾ ಸ್ಥಳದಲ್ಲಿ ಯಾವುದೇ ದುರ್ಘಟನೆ, ಅವಘಡ ಸಂಭವಿಸದಂತೆ ಮಾಲಿನ್ಯ ಮುಕ್ತ ಪರಿಸರ ನಿರ್ಮಿಸುವುದೇ ಪ್ರತಿಯೊಂದು ಕೈಗಾರಿಕೆಯ ಮೂಲ ಉದ್ದೇಶವಾಗಬೇಕೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿ.ಎಂ.ಎಂ.ಇಸ್ಪಾತ್ ಸಂಸ್ಥೆಯ ಮನೀಶ್.ಡಿ.ವರ್ಣೇಕರ್ ಮಾತನಾಡಿ ಕೈಗಾರಿಕೆಗಳಲ್ಲಿ, ಉದ್ದಿಮೆಗಳಲ್ಲಿ, ಉತ್ತಮ ಗುಣ ಮಟ್ಟದ ವಸ್ತುಗಳನ್ನು ತಯಾರಿಸುವುದರ ಜೊತೆ ಅವುಗಳನ್ನು ಸುರಕ್ಷತೆಯಿಂದ ತಯಾರಿಸುವುದೇ ಈ ಸುರಕ್ಷತಾ ದಿನಾಚರಣೆಯ ಉದ್ದೇಶವಾಗಿದೆ. ಕೈಗಾರಿಕೆಗೆ ಸಂಬಂಧಿಸಿದ ಕಾಯ್ದೆಗಳನ್ನು ಪರಿಪೂರ್ಣವಾಗಿ ಜಾರಿಗೆ ತರುವುದರ ಜೊತೆ ಕೈಗಾರಿಕೆಗಳು ಸುರಕ್ಷಿತವಾದ ವಾತಾವರಣವನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಕೈಗಾರಿಕೆಯಲ್ಲಿ ತೊಡಗಿರುವ ಪ್ರತಿಯೊಬ್ಬ ಕಾರ್ಮಿಕನಿಗೂ ತರಬೇತಿ ಮೂಲಕ ತಿಳುವಳಿಕೆ ನೀಡುವುದರ ಜೊತೆ ಕಾರ್ಮಿಕರಿಗೆ, ಮೇಲ್ವಿಚಾರಕರಿಗೆ ಸುರಕ್ಷತಾ ತರಬೇತಿ ಕಾರ್ಯಕ್ರಮ, ತುರ್ತು ಯೋಜನೆಗಳ ತಯಾರಿ, ನಿರ್ವಹಣೆ, ವೈದ್ಯಕೀಯ ನೆರವು, ಸಂಬಂಧಪಟ್ಟ ವಿಷಯಗಳ ಬಗ್ಗೆ ಕಾರ್ಯಗಾರಗಳು, ತುರ್ತು ಯೋಜನೆಗಳ ಅಣಕು ಪ್ರದರ್ಶನ, ಮಹಿಳಾ ಕಾರ್ಮಿಕರಿಗೆ ಕಾನೂನು ಅರಿವು ನೀಡುವುದರ ಜೊತೆ ಸುರಕ್ಷತಾ ಕಾರ್ಯವಿಧಾನ ಮತ್ತು ಚಟುವಟಿಕೆಗಳ ಕೈಪಿಡಿ, ಹಸ್ತ ಪ್ರತಿಗಳು, ಸುರಕ್ಷತಾ ಬಿತ್ತಿ ಪತ್ರ, ಬ್ಯಾನರ್, ಮುಂತಾದ ಕಾರ್ಯ ಚಟುವಟಿಕೆಗಳು ಕೈಗಾರಿಕೆಗಳಲ್ಲಿ ನಿರಂತರವಾಗಿ ನಡೆಯುತ್ತಿವೆ ಎಂದರು. ಇನ್ನೋರ್ವ ಅತಿಥಿ ಬಿ.ಎಂ.ಎಂ. ಸಂಸ್ಥೆಯ ಮುಖ್ಯಸ್ಥ ರಾಜೇಂದ್ರ ಮುಂದ್ರಾ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಸಂಸ್ಥೆಯ ಉದ್ಯೋಗಿಗಳು ಸಂಸ್ಥೆಯ ಮುಖ್ಯ ದ್ವಾರದಿಂದ ಸಮಾರಂಭದ ಸ್ಥಳದವರೆಗೆ ಸುರಕ್ಷತಾ ಘೋಷಣೆಗಳನ್ನು ಕೂಗುತ್ತಾ ಸುರಕ್ಷತಾ ಪಥ ಸಂಚಲನ ನಡೆಸಿದರು.
ಈ ಸಂದರ್ಭದಲ್ಲಿ ಬಿ.ಎಂ.ಎಂ.ಇಸ್ಪಾತ್ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಮನೀಶ್.ಡಿ.ವರ್ಣೇಕರ್,  ಗಣೇಶ್ ಹೆಗಡೆ, ಸುಶೀಲ್ ಕುಮಾರ್ ಹಾಗೂ ಎಲ್ಲಾ ಉದ್ಯೋಗಿಗಳಿಗೆ ಸುರಕ್ಷತಾ ಪ್ರಮಾಣ ವಚನ ಭೋದಿಸಲಾಯಿತು.ನಂತರ ಸುರಕ್ಷತಾ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವೇದಿಕೆಯ ಗಣ್ಯರು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸುರಕ್ಷತಾ ಅಧಿಕಾರಿ ದಿನೇಶ್ ಮಿಶ್ರಾ ಸುರಕ್ಷತಾ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಸುರಕ್ಷತಾ ವಿಭಾಗದ ಮಾರುತಿ  ನಿರೂಪಿಸಿ, ಪರಿಸರ ವಿಭಾಗದ ಉಪ ವ್ಯವಸ್ಥಾಪಕ ಕೆ.ನಾಗೇಶ್ವರ ರಾವ್ ವಂದಿಸಿದರು.