ಬಿ.ಆರ್.ಪಾಟೀಲ್, ದರ್ಶನಾಪುರ ಸಚಿವರಾಗಲಿ: ಶ್ರೀಗಳ ಸಲಹೆ

ಕಲಬುರಗಿ,ಮೇ 19: ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಅನುಭವಿ ರಾಜಕಾರಣಿಗಳು ಹಾಗೂ ಲಿಂಗಾಯತ ಸಮಾಜದ ಪ್ರಮುಖ ಹಿರಿಯ ಮುಖಂಡರಾದ ಅಳಂದ ಶಾಸಕ ಬಿ.ಆರ್.ಪಾಟೀಲ್ ಹಾಗೂ ಶಹಾಪುರ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ನೂತನ ಸರಕಾರದ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಯಾದಗಿರಿ ಜಿಲ್ಲಾ ಮಠಾಧೀಶರ ಒಕ್ಕೂಟ ಅಧ್ಯಕ್ಷರಾದ ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ, ಸ್ಟೇಷನ್ ಬಬಲಾದ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ತೊನಸನಹಳ್ಳಿಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು ಕಾಂಗ್ರೆಸ್ ಹೈಕಮಾಂಡ್ ಗೆ ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಶ್ರೀಗಳು, ಈ ಇಬ್ಬರೂ ಅಭಿವೃದ್ಧಿ ಪರ ಒಲವು ಹೊಂದಿರುವ ಕಳಂಕರಹಿತ ರಾಜಕಾರಣಿಗಳಾಗಿದ್ದು, ಇವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದರಿಂದ ಸರಕಾರಕ್ಕೂ ಉತ್ತಮ ಹೆಸರು ಬರುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಾಟೀಲ್ ಹಾಗೂ ದರ್ಶನಾಪುರ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಈ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಆಪ್ತ ಸಲಹೆ ನೀಡಿದ್ದಾರೆ.