
ಕಲಬುರಗಿ,ಮೇ 16: ಸಮಾಜವಾದಿ ಚಿಂತಕ,ಅಳಂದ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಿ ಅಳಂದ ಜನತೆಯ ದಶಕಗಳ ಕನಸು ನನಸು ಮಾಡುವಂತೆ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ ದೇಗಾಂವ ಮನವಿ ಮಾಡಿದ್ದಾರೆ.ಸ್ವಾತಂತ್ರ್ಯ ಬಂದು 65 ವರ್ಷವಾದರೂ ಅಳಂದ ಕ್ಷೇತ್ರಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿಲ್ಲ. ಆಳಿರುವ ಎಲ್ಲಾ ಸರಕಾರಗಳು ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿವೆ.ಅಳಂದ ಪ್ರತಿನಿಧಿಸಿದ ಯಾವೊಬ್ಬ ಶಾಸಕರು ಇಲ್ಲಿಯವರೆಗೆ ಸಚಿವರಾಗಿಲ್ಲ.ಡಾ.ಡಿ.ಎಮ್.ನಂಜುಂಡಪ್ಪನವರ ವರದಿ ಅನ್ವಯ ಅಳಂದ ದಶಕಗಳಿಂದ ಹಿಂದುಳಿದ ತಾಲೂಕಗಳ ಪಟ್ಟಿಯಲ್ಲಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಬಹುಮತ ಸರಕಾರ ರಚನೆಯಾಗಲಿದೆ. ಅದೇ ಪಕ್ಷದ ಹಿರಿಯ ಶಾಸಕರಾಗಿ ಆಯ್ಕೆಯಾದ ಬಿ.ಆರ್.ಪಾಟೀಲ್ ಅವರಿಗೆ ಸಂಪುಟ ದರ್ಜೆಯ ಸಚಿವರನ್ನಾಗಿ ಮಾಡಬೇಕು ಎನ್ನುವುದು ಅಳಂದ ಕ್ಷೇತ್ರದ ಜನರ ಹಕ್ಕೊತ್ತಾಯವಾಗಿದೆ.ಜಿಲ್ಲೆಯಿಂದ ಗೆದ್ದ ಬಹುತೇಕ ಕಾಂಗ್ರೆಸ್ ಶಾಸಕರು ಈಗಾಗಲೇ ಸರಕಾರದಲ್ಲಿ ವಿವಿಧ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ.ಮತ್ತೆ ಅವರುಗಳನ್ನೆ ಪರಿಗಣಿಸಿದರೆ ಅಳಂದಕ್ಕೆ ಸಾಮಾಜಿಕ ನ್ಯಾಯ ನೀಡಿದಂತೆ ಆಗಲಾರದು. ಕಾರಣ ಜಿಲ್ಲೆಯ ಉಳಿದ ಶಾಸಕರು ಕೂಡಾ ಬಿ.ಆರ್.ಪಾಟೀಲ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.