ನ. 16 ನಿತೀಶ್ ಪ್ರಮಾಣ ವಚನ

ಪಾಟ್ನಾ, ನ. ೧೨- ಬಿಹಾರದ ಮುಖ್ಯಮಂತ್ರಿಯಾಗಿ ಸತತ ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯಲು ಸಜ್ಜಾಗಿರುವ ನಿತೀಶ್ ಕುಮಾರ್ ಅವರು, ಎರಡು ದಶಕಗಳ ಅವಧಿಯಲ್ಲಿ ೭ನೇ ಬಾರಿಗೆ ಮುಂದಿನ ವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಬಿಜೆಪಿಯ ಹಿರಿಯ ನಾಯಕರು ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಹಾಗೂ ಪ್ರಬಲ ಖಾತೆಗಳಿಗಾಗಿ ಖಾತೆಗಳನ್ನು ಪಡೆಯಲು ಲಾಬಿ ಜೋರಾಗಿ ನಡೆದಿದೆ.
ಈ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿ ಹೆಚ್ಚು ಸ್ಥಾನ ಗಳಿಸಿರುವುದರಿಂದ ಸಂಪುಟದಲ್ಲಿ ಬಿಜೆಪಿಗೆ ಸಿಂಹಪಾಲು ದಕ್ಕಲಿದೆ.
ಸಚಿವ ಸ್ಥಾನ ಹಂಚಿಕೆ ಹಾಗೂ ಖಾತೆಗಳ ಪಡೆಯುವ ಸಂಬಂಧ ಎರಡು ಪಕ್ಷಗಳ ನಾಯಕರ ಮಧ್ಯೆ ಚರ್ಚೆ ನಡೆದಿದೆ.
ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸೂತ್ರ ಹಿಡಿಯುವುದರಿಂದ ಸಹಜವಾಗಿ ಬಿಜೆಪಿಗೆ ಪ್ರಮುಖ ಖಾತೆಗಳೂ ದೊರೆಯುವ ಸಾಧ್ಯತೆ ಇದೆ.
ನಿತೀಶ್ ಸಂಪುಟದಲ್ಲಿ ಬಿಜೆಪಿಯಿಂದ ಉಪಮುಖ್ಯಮಂತ್ರಿ ಯಾರಾಗಬೇಕೆಂಬ ಬಗ್ಗೆ ಕೂಡ ಚರ್ಚೆ ನಡೆದಿದೆ.
ಸಿಎಂ ಆಗಿ ದಾಖಲೆಗೆ ಸಜ್ಜು:
ಬಿಹಾರದಲ್ಲಿ ಶ್ರೀಕೃಷ್ಣ ಸಿನ್ಹಾ ಅವರು ೧೭ ವರ್ಷ ೫೨ ದಿನಗಳ ಕಾಲ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದು, ಸದ್ಯ ನಿತೀಶ್ ಕುಮಾರ್ ಅವರು, ೧೪ ವರ್ಷ ೮೨ ದಿನ ಮುಖ್ಯಮಂತ್ರಿಯಾಗಿದ್ದು, ಸಿನ್ಹಾ ಅವರ ದಾಖಲೆಯನ್ನು ಮುರಿಯಲು ಮುಂದಾಗಿದ್ದಾರೆ.
೨೦೦೦ ಇಸವಿಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ ನಿತೀಶ್ ಕುಮಾರ್ ಅವರು, ೨೦೦೫ ರಲ್ಲಿ ಎನ್ ಡಿ ಎ ಸಹಕಾರದೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದರು.
೨೦೧೪ ರಲ್ಲಿ ಮತ್ತೆ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್, ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು.
೨೦೧೫ ರಲ್ಲಿ ಆರ್‌ಜೆಡಿ, ಕಾಂಗ್ರೆಸ್ ಸಹಕಾರದೊಂದಿಗೆ ಚುನಾವಣೆ ಎದುರಿಸಿ ಮುಖ್ಯಮಂತ್ರಿಯಾದರು. ೨೦೧೭ ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಆರ್ ಜೆಡಿಯು ತೇಜಸ್ವಿ ಯಾದವ್ ಹಣ ಲೇವಾದೇವಿ ಕಾಯ್ದೆಯಲ್ಲಿ ಸಿಕ್ಕ ಆರೋಪ ಕೇಳಿಬರುತ್ತಿದ್ದಂತೆ, ಆರ್ ಜೆಡಿಗೆ ಗುಡ್ ಬೈ ಹೇಳಿ, ಮತ್ತೆ ಬಿಜೆಪಿ ಜೊತೆ ಸೇರಿ ಮುಖ್ಯಮಂತ್ರಿಯಾಗಿದ್ದರು.
ಇದೀಗ ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿರುವ ನಿತೀಶ್ ಕುಮಾರ್ ಅವರು, ಸೋಮವಾರ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚಿವೆ.

ರಾಜೀನಾಮೆ ಸಲ್ಲಿಕೆ
ಪ್ರಸ್ತುತ ವಿಧಾನಸಭೆಯ ಅವಧಿ ಶೀಘ್ರದಲ್ಲೇ ಮುಗಿಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ರಾಜ್ಯಪಾಲರನ್ನು ಭೇಟಿಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ.
ನಿತೀಶ್ ಕುಮಾರ್ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ರಾಜ್ಯಪಾಲರು ಅದನ್ನು ಅಂಗೀಕರಿಸಿ ಪ್ರಸ್ತುತ ವಿಧಾನಸಭೆಯನ್ನು ವಿಸರ್ಜಿಸಲಿದ್ದಾರೆ. ಆ ಬಳಿಕ ಹೊಸಸರ್ಕಾರ ರಚನೆಗೆ ಜೆಡಿಯು, ಬಿಜೆಪಿ ನೇತೃತ್ವದ ಮೈತ್ರಿಕೂಟದ ನಾಯಕರಾಗಲಿರುವ ನಿತೀಶ್ ಕುಮಾರ್ ಅವರು, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ನಂತರ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅವರನ್ನು ಆಹ್ವಾನಿಸಲಿದ್ದಾರೆ.

ಆರ್ ಜೆಡಿ ಸಭೆ
ತೇಜಸ್ವಿ ಯಾದವ್ ನೇತೃತ್ವದ ಆರ್ ಜೆಡಿ ಪಕ್ಷ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ೭೫ ಸ್ಥಾನಗಳನ್ನು ಗೆದ್ದು, ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ.
ಈ ಹಿನ್ನೆಲೆಯಲ್ಲಿ ಇಂದು ಅಥವಾ ನಾಳೆ ಪಕ್ಷದ ನೂತನ ಶಾಸಕರ ಸಭೆ ನಡೆಯಲಿದೆ.

:=>