ಬಿಹಾರ ಬಿಜೆಪಿ- ಜೆಡಿಯು ಸರ್ಕಾರ ನಿಶ್ಚಿತ

ಪಾಟ್ನಾ,ಜ.೨೭- ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೈ ಕೊಟ್ಟು ಮತ್ತೆ ಎನ್‌ಡಿಎ ತೆಕ್ಕೆಗೆ ಮರಳಲು ನಿರ್ಧರಿಸಿದ್ದು, ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಳೆ ಬಿಜೆಪಿ, ಜೆಡಿಯು ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ನಿಶ್ಚಿತ.
ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಆರ್ ಜೆಡಿ ಮೈತ್ರಿ ಕಡಿದುಕೊಂಡು ಬಿಜೆಪಿ ಜೊತೆ ಮತ್ತೆ ಮೈತ್ರಿ ಮಾಡಿಕೊಂಡು ಈ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿದ್ದು, ಬಿಜೆಪಿ ನಿತೀಶ್ ಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದೆ. ಈ ಮೂಲಕ ಬಿಹಾರ್‌ದಲ್ಲಿ ಲೋಕಸಭಾ ಚುನಾವಣೆಯ ಹೊಸ್ತಿಲಿಲ್ಲಿ ಮಹತ್ವ ರಾಜಕೀಯ ಬೆಳವಣಿಗೆಗಳು ನಡೆದಿದೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಕಟ್ಟಿಹಾಕಲು ಇಂಡಿಯಾ ಮೈತ್ರಿಕೂಟ ಸಜ್ಜಾಗುತ್ತಿದೆ. ಈಗಾಗಲೇ ಸೀಟು ಹಂಚಿಕೆ ವಿಚಾರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಜೊತೆ ಸೀಟು ಹೊಂದಾಣಿಕೆಗೆ ಅಸಮ್ಮತಿ ವ್ಯಕ್ತಪಡಿಸಿದೆ. ಈ ವಿದ್ಯಮಾನಗಳ ನಡುವೆ ನಿತೀಶ್ ಕುಮಾರ್ ಎನ್‌ಡಿಎ ಗೆ ಮರಳಲು ಮುಂದಾಗಿರುವುದು ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯಾಗಲಿದೆ ಎಂದು ಹೇಳಲಾಗಿದೆ.ಹಾವು ಏಣಿ ಆಟ ಆಡುವುದರಲ್ಲಿ ಎತ್ತಿದ ಕೈ ಆಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್ ಜೆಡಿ, ಕಾಂಗ್ರೆಸ್ ಮೈತ್ರಿಕೂಟಕ್ಕೆ ಎಳ್ಳುನೀರು ಬಿಟ್ಟು ಬಿಜೆಪಿ ಜೊತೆಗೂಡಿ ರಾಜ್ಯದಲ್ಲಿ ನಾಳೆ ಹೊಸ ಸರ್ಕಾರ ರಚನೆಯಾಗಲಿದ್ದುಈ ಮೂಲಕ ಬಿಹಾರದಲ್ಲಿ ೯ನೇ ಬಾರಿಗೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ ೧೦ ಗಂಟೆಗೆ ಜೆಡಿಯು ಶಾಸಕಾಂಗ ಸಭೆ ಕರೆದಿದ್ದು ಅದಾದ ಬಳಿಕ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಜೊತೆಗೂಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಿದ್ದಾರೆ.ಬಿಜೆಪಿ- ಜೆಡಿಯು ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದು ಎರಡು ಉಪ ಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ೨೦೨೦ರಲ್ಲಿ ಬಿಜೆಪಿ ಜೊತೆ ಮೈತ್ರಿ ಕಡಿತ ಮಾಡಿಕೊಂಡು ಆರ್‌ಜೆಡಿ- ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಮಾಡಿದ ಬಳಿಕ ಮತ್ತೆ ಬಿಜೆಪಿ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯಯಾತ್ರೆಯ ಭಾಗವಾಗಲು ನಿತೀಶ್ ಕುಮಾರ್ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ.
ಐಎಎಸ್, ಐಪಿಎಸ್ ಅಧಿಕಾರಿಗಳ ಬದಲಾವಣೆ:
ಬಿಹಾರದಲ್ಲಿ ಬಿಜೆಪಿ ಜತೆಗೂಡಿ ಸರ್ಕಾರ ರಚನೆ ಮಾಡಲು ಮುಂದಾಗಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳನ್ನು ದೊಡ್ಡ ಪ್ರಮಾಣದ ವರ್ಗಾವಣೆ ಮಾಡಲಾಗಿದೆ.
ಬಿಹಾರ ಸರ್ಕಾರ ೨೨ ಐಎಎಸ್, ೭೯ ಐಪಿಎಸ್ ಮತ್ತು ೪೫ ಬಿಹಾರ ಆಡಳಿತ ಸೇವೆ (ಬಿಎಎಸ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ವರ್ಗಾವಣೆಗೊಂಡ ಅಧಿಕಾರಿಗಳಲ್ಲಿ ಐವರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ೧೭ ಎಸ್‌ಪಿಗಳು ಸೇರಿದ್ದಾರೆ.

ವಿಸರ್ಜನೆ ಇಲ್ಲ:
ಮುಂದಿನ ವರ್ಷ ಬಿಹಾರ ವಿಧಾನಸಭೆ ಚುನವಾಣೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಧಾನಸಭೆ ವಿಸರ್ಜನೆ ಮಾಡದೆ, ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಜತೆಗೂಡಿ ಹೋರಾಟ ಮಾಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ.
ಬಿಜೆಪಿ ಮತ್ತು ನಿತೀಶ್ ಅವರ ಜನತಾ ದಳ ಎರಡೂ ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರನ್ನು ಕರೆಸಿ ಒಪ್ಪಂದವನ್ನು ಮುಕ್ತಾಯಗೊಳಿಸಲಾಗಿದೆ ಎನ್ನಲಾಗಿದೆ.

  • ಆರ್ ಜೆಡಿ- ಕಾಂಗ್ರೆಸ್ ಮೈತ್ರಿಗೆ ನಿತೀಶ್ ಕುಮಾರ್ ಎಳ್ಳುನೀರು
  • ಬಿಹಾರದಲ್ಲಿ ಬಿಜೆಪಿ ಜೊತೆಗೂಡಿ ಮತ್ತೊಮ್ಮೆ ಸರ್ಕಾರ ರಚನೆ
  • ನಾಳೆ ೯ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನಿತೀಶ್
  • ಬಿಜೆಪಿಗೆ ಎರಡು ಡಿಸಿಎಂ ಹುದ್ದೆ ನೀಡಲು ಸಮ್ಮತಿ
  • ರಾಜಕೀಯ ಹಾವು ಏಣಿ ಆಟದಲ್ಲಿ ನಿತೀಶ್ ಕುಮಾರ್ ಮುಂದೆ

ಕಾಂಗ್ರೆಸ್ ಸಭೆ
ಬಿಹಾರದಲ್ಲಿ ರಾಜಕೀಯ ವಿದ್ಯಮಾನಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಮುಂದೆ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲು ಮಹತ್ವದ ಕಾಂಗ್ರೆಸ್ ಸಭೆ ಕರೆಯಲಾಗಿದೆ.
ಬಿಹಾರದ ಕಾಂಗ್ರೆಸ್ ಮುಖಂಡ ಶಕೀಲ್ ಅಹ್ಮದ್ ಖಾನ್ ಮಧ್ಯಾಹ್ನದ ನಂತರ ಕಾಂಗ್ರೆಸ್ ಶಾಸಕರು ಮತ್ತು ಮಾಜಿ ಶಾಸಕರ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಗೂ ಮುಂದಿನ ಸಭೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ.
ಯುವ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಜ. ೨೯ ರಂದು ಬಿಹಾರಕ್ಕೆ ಪ್ರವೇಶಿಸಲಿದೆ. ರಾಹುಲ್ ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸುವ ಕುರಿತಂತೆ ಸಿದ್ಧತೆ ಮಾಡಿಕೊಂಡು ಈ ಸಭೆ ಕರೆಯಲಾಗಿದೆ ಎಂದು ಖಾನ್ ಸ್ಪಷ್ಟಪಡಿಸಿದ್ದಾರೆ.