ಬಿಹಾರ ಚುನಾವಣೆ 1,157 ಉಮೇದುವಾರರಿಗೆ ಅಪರಾಧ ಹಿನ್ನಲೆ

ಪಟನಾ, ನ 8- ಬಿಹಾರ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದವರ ಪೈಕಿ1,157 ಉಮೇದುವಾರರು ಅಪರಾಧ ಹಿನ್ನೆಯುಳ್ಳವರಾಗಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳಿಂದ ಗೊತ್ತಾಗಿದೆ.
ಮೂರು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 3,733 ಮಂದಿ ಸ್ಪರ್ಧಿಸಿದ್ದಾರೆ. ಇದರಲ್ಲಿ 371 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನದ ಅನ್ವಯ ಮಾರ್ಚ್‌ನಲ್ಲಿ ಆಯೋಗವು ಪ್ರಕಟಣೆಯೊಂದನ್ನು ಹೊರಡಿಸಿತ್ತು. ಅಪರಾಧ ಹಿನ್ನೆಲೆ ಇರುವವರನ್ನು ಏತಕ್ಕಾಗಿ ಕಣಕ್ಕಿಳಿಸುತ್ತಿದ್ದೀರಿ ಎಂಬುದಕ್ಕೆ ಸಮರ್ಥನೆ ನೀಡುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಿತ್ತು. ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಅಪರಾಧದ ಹಿನ್ನೆಲೆಯ ಮಾಹಿತಿಯನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿತ್ತು.

ಎಲ್ಲಾ ರಾಜಕೀಯ ಪಕ್ಷಗಳೂ ತಾವು ಟಿಕೆಟ್‌ ನೀಡಿರುವ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಕುರಿತು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಮೂರು ಹಂತಗಳಲ್ಲಿ ಜಾಹೀರಾತು ನೀಡಬೇಕೆಂದೂ ಆಯೋಗವು ಸೆಪ್ಟೆಂಬರ್‌ನಲ್ಲಿ ಸೂಚಿಸಿತ್ತು. ಚುನಾವಣಾ ಅವಧಿಯಲ್ಲಿ ಈ ಜಾಹೀರಾತುಗಳು ಪ್ರಕಟವಾಗಬೇಕೆಂದೂ ನಿರ್ದೇಶಿಸಿತ್ತು.