ಬಿಹಾರ, ಎರಡನೇ ಹಂತದ ಮತದಾನ ಬಿರುಸು

ಪಾಟ್ನಾ. ನ. ೩- ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಗೆ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು ೧೭ ಜಿಲ್ಲೆಗಳ ೯೪ ವಿಧಾನಸಭಾ ಕ್ಷೇತ್ರ ಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ೩೫ ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ.

ಬೆಳಗ್ಗೆ ೭ಗಂಟೆಯಿಂದಲೇ ಮತದಾರರು ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿದರು. ಚುನಾವಣಾ ಕಣದಲ್ಲಿ ೧೪೬೪ ಅಭ್ಯರ್ಥಿಗಳು ಇದ್ದು ಮತದಾರರು ಅವರ ಹಣೆಬರಹವನ್ನು ಎಂದು ತೀರ್ಮಾನ ಮಾಡಲಿದ್ದಾರೆ.

ಮಹಾಘಟಬಂಧನ್ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಸೇರಿದಂತೆ ಹಲವು ಘಟನೆಗಳ ನಾಯಕರ ರಾಜಕೀಯ ಭವಿಷ್ಯ ಇಂದು ತೀರ್ಮಾನವಾಗಲಿದೆ. ಬಿಜೆಪಿಯ ೪೬ ಜೆಡಿ ಯು ಪಕ್ಷದ ೪೩, ಆರ್ಜೆಡಿ ಪಕ್ಷದ ೫೬ ಹಾಗೂ ಕಾಂಗ್ರೆಸ್ನ ೨೪ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈಗಾಗಲೇ ಮೊದಲ ಹಂತದ ಚುನಾವಣೆಯಲ್ಲಿ ೭೧ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ ೨೮ರಂದು ಮತದಾನ ನಡೆದಿದೆ. ಮೂರನೇ ಹಂತದ ಮತದಾನ ನವೆಂಬರ್ ೭ ರಂದು ನಡೆಯಲಿದೆ. ನವಂಬರ್ ೧೦ರಂದು ಫಲಿತಾಂಶ ಹೊರಬೀಳಲಿದೆ.

ಅಕ್ಟೋಬರ್ ೨೮ ಬಿಹಾರದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ ೫೪ ರಷ್ಟು ಮತದಾನವಾಗಿತ್ತು. ವಿಧಾನಸಭೆಯ ಒಟ್ಟು ೨೪೩ ಕ್ಷೇತ್ರಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ಕೋರೋ ನಾ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಮತಗಟ್ಟೆ ಅಧಿಕಾರಿಗಳು ಕೈಗೊಂಡಿದ್ದಾರೆ. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸುಮಾರು ೨ಕೋಟಿ ೮೬ ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಸಾಧ್ಯತೆಗಳಿವೆ. ಚುನಾವಣಾ ಆಯೋಗ ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ.

ಮತಗಟ್ಟೆಗಳ ಸುತ್ತಮುತ್ತ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ಆಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಪ್ರಧಾನಿ ಮನವಿ

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಸಂವಿಧಾನಬದ್ಧ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾತಂತ್ರ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತದಾರರಿಗೆ ಮನವಿ ಮಾಡಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಜೊತೆಗೆ ದೇಶದ ವಿವಿಧ ಹತ್ತು ರಾಜ್ಯಗಳ ೫೪ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು ಈ ಕ್ಷೇತ್ರಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಅವರು ಮನವಿ ಮಾಡಿದ್ದಾರೆ.

ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಇದೊಂದು ಸದಾವಕಾಶ.ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನರೇಂದ್ರ ಮೋದಿ ಟ್ವೀಟ್ ಸಂದೇಶದಲ್ಲಿ ಮನವಿ ಮಾಡಿದ್ದಾರೆ.

ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಹಾರ ವಿಧಾನ ಸಭೆಯ ೩ನೇ ಹಾಗೂ ಕೊನೆಯ ಹಂತದ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಪ್ರಧಾನಿಯವರು ಇಂದು ಪೋರ್ಬ್ ಗಂಜ್ ಮತ್ತು ಸಹಾರ ಸ್ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.