ಬಿಹಾರದಲ್ಲಿ ಭೂಕಂಪನ

ಪಾಟ್ನಾ, ಏ.೧೨- ಇಂದು ಮುಂಜಾನೆ ೫.೩೫ರ ವೇಳೆಗೆ ಬಿಹಾರದ ಅರಾರಿಯಾ ಸಮೀಪ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ೪.೩ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.

ಸುಮಾರು ೧೦ ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರ ಪುರ್ನಿಯಾ ಸಮೀಪ ಇತ್ತು ಎಂದು ಉನ್ನತ ಮೂಲಗಳು ಹೇಳಿವೆ.

ಬುಧವಾರ ನಸುಕಿನಲ್ಲಿ ಸವಿ ನಿದ್ದೆಯಲ್ಲಿದ್ದ ಸಂದರ್ಭ ಉಂಟಾದ ಈ ಕಂಪನದಿಂದ ಎಚ್ಚೆತ್ತುಕೊಂಡು ಭಯಭೀತರಾದ ಹಲವು ಮಂದಿ ತಮ್ಮ ಅನುಭವಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಮೆರಿಕದ ಜಿಯಾಲಾಜಿಕಲ್ ಸರ್ವೆ, ಈ ಭೂಕಂಪದ ತೀವ್ರತೆಯನ್ನು ೪.೦ ಎಂದು ಹೇಳಿದೆ. ಇನ್ನೂ, ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಕೂಡಾ ಕಂಪನದ ಅನುಭವ ಆಗಿದೆ. ಆದರೆ ಯಾವುದೇ ಆಸ್ತಿಪಾಸ್ತಿ ಅಥವಾ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.