ಬಿಹಾರದಲ್ಲಿ ನಿತೀಶ್ ವಿಶ್ವಾಸಮತ ಯಾಚನೆ

ಪಾಟ್ನಾ, ಫೆ.೧೨-ಬಿಹಾರದಲ್ಲಿ ಜೆಡಿಯು ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರ ಇಂದು ಸದನದಲ್ಲಿ ವಿಶ್ವಾಸಮತ ಪರೀಕ್ಷೆ ಎದುರಿಸಲಿದ್ದು, ಸುಲಭ ಗೆಲುವಿನ ಭರವಸೆ ಮೈತ್ರಿಕೂಟದಲ್ಲಿದೆ. ಇನ್ನೂ ವಿಶ್ವಾಸಮತ ಯಾಚನೆಯೊಂದಿಗೆ ರಾಜ್ಯದ ಬಜೆಟ್ ಅಧಿವೇಶನ ಆರಂಭವಾಗಲಿದೆ.
ಬಿಜೆಪಿಯ ೭೮ ಶಾಸಕರಿದ್ದು, ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ ೪೫ ಶಾಸಕರನ್ನು ಹೊಂದಿದೆ. ಜಿತಿನ್ ರಾಮ್ ಮಾಂಜಿಯವರ ಹಿಂದೂಸ್ತಾನ್ ಅವಾಮ್ ಮೋರ್ಚಾ ೪ ಸ್ಥಾನಗಳನ್ನು ಹೊಂದಿದೆ. ಉಳಿದಂತೆ ಒಬ್ಬ ಪಕ್ಷೇತರ ಈ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ವಿರೋಧಿ ಕೂಟವಾಗಿರುವ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ೧೧೪ ಸ್ಥಾನಗಳನ್ನು ಹೊಂದಿದೆ.
ಬಿಹಾರ ವಿಧಾನಸಭೆ ಸ್ಪೀಕರ್ ಆಗಿರುವ ಆರ್ ಜೆಡಿ ಮುಖಂಡ ಅವಧ್ ಬಿಹಾರಿ ಚೌಧರಿ ಅವಿಶ್ವಾಸ ನಿಲುವಳಿಯನ್ನು ಎದುರಿಸುತ್ತಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಕೂಟದ ಹಲವು ಮುಖಂಡರು ಸ್ಪೀಕರ್ ಪದಚ್ಯುತಿಗೆ ಆಗ್ರಹಿಸಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣದ ಬಳಿಕ ಸ್ಪೀಕರ್ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ.
ಸ್ಪೀಕರ್ ಪದಚ್ಯುತಿಗೆ ಜೆಡಿಯು-ಬಿಜೆಪಿ ಕೂಟಕ್ಕೆ ಅರ್ಧದಷ್ಟು ಶಾಸಕರ ಅಗತ್ಯವಿದೆ ಎಂದು ಆರ್ ಜೆಡಿ ಸಂಸದ ಮನೋಜ್ ಝಾ ಹೇಳಿದ್ದಾರೆ. ಆದರೆ ಈ ತಡೆಯನ್ನು ಎನ್ ಡಿಎ ಸುಲಭವಾಗಿ ದಾಟುವ ಸಾಧ್ಯತೆ ಇದೆ. ಸ್ಪೀಕರ್ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿರುವ ಚೌಧರಿ, ಮುಜುಗರದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಇಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಈ ಮಧ್ಯೆ ಆರ್ ಜೆಡಿಯ ಹಲವು ಮಂದಿ ಶಾಸಕರು ನಾಪತ್ತೆಯಾಗಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.ಒಟ್ಟಿನಲ್ಲಿ ಒಟ್ಟು ೨೪೩ ಸದಸ್ಯಬಲದ ಬಿಹಾರದಲ್ಲಿ ಬಹುಮತಕ್ಕೆ ೧೨೨ ಸದಸ್ಯರ ಅಗತ್ಯವಿದ್ದು, ಬಿಜೆಪಿ-ಜೆಡಿಯು ಮೈತ್ರಿಕೂಟ ೧೨೮ ಸದಸ್ಯರನ್ನು ಹೊಂದಿದೆ.